Homeಕರ್ನಾಟಕಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ: ಸಚಿವ ಶಿವಾನಂದ ಪಾಟೀಲ

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ: ಸಚಿವ ಶಿವಾನಂದ ಪಾಟೀಲ

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್ ಗೆ 6,783 ರೂ. ನಿಗದಿಪಡಿಸಿದ್ದು, ಬೆಂಬಲ ಬೆಲೆಯ ಮಾರ್ಗಸೂಚಿ ಅನ್ವಯ ಕೊಪ್ಪಳ, ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ,ಗದಗ ಮತ್ತು ಬಾಗಲಕೋಟ, ದಾವಣಗೆರೆ, ರಾಯಚೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ರೈತರಿಂದ ಶೇಂಗಾ ಖರೀದಿಗೆ ಅನುಮತಿ ದೊರೆತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಚಿವರು ಹೇಳಿದ್ದಾರೆ.

“ಈಗ ಅನುಮತಿ ದೊರೆತಿರುವ ಶೇಂಗಾ ಸೇರಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಎಂಟು ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗಿದೆ. ಇದುವರೆಗೆ ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿಯನ್ನು ಖರೀದಿಸಲಾಗಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು” ಎಂದು ತಿಳಿಸಿದ್ದಾರೆ.

“ರಾಜ್ಯದ ಮನವಿಗೆ ಕೇಂದ್ರ ಪುರಸ್ಕರಿಸಿದ್ದು, ಶೇಂಗಾ ಖರೀದಿಗೆ ಕೇಂದ್ರ ಸರ್ಕಾರದಿಂದ ಎರಡು, ರಾಜ್ಯ ಸರ್ಕಾರದಿಂದ ನಾಲ್ಕು ಏಜನ್ಸಿಗಳನ್ನು ಗುರುತಿಸಲಾಗಿದೆ. ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ನಾಫೆಡ್ ಸಂಸ್ಥೆ, ಎನ್ಸಿಸಿಎಫ್ ಸಂಸ್ಥೆ ಹಾಗೂ ಖರೀದಿ ಏಜನ್ಸಿಗಳೊಂದಿಗೆ ಸಮಾಲೋಚನೆ ನಡೆಸಿ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ” ಎಂದಿದ್ದಾರೆ.

“ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸುವ ಪೂರ್ವದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಖರೀದಿ ಕೇಂದ್ರದಿಂದ ದೂರುಗಳು ಬರಬಾರದು” ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments