ಕೇಂದ್ರ ಸರ್ಕಾರ ಈಗ ರಾಜ್ಯಕ್ಕೆ ₹22.50 ಬೆಲೆಗೆ ಅಕ್ಕಿ ಕೊಟ್ಟು ವಾರ್ಷಿಕ ₹2,280 ಕೋಟಿ ಉಳಿಸಿಕೊಡಲು ಮುಂದಾದರೆ ರಾಜ್ಯ ಸರ್ಕಾರವೇ ಇದಕ್ಕೆ ಸಿದ್ಧವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
“ರಾಜ್ಯದ ಜನತೆಗೆ 10 ಕೆಜಿ ಅಕ್ಕಿಯೂ ಇಲ್ಲ, 5 ಕೆಜಿಯ ದುಡ್ದೂ ಲಭಿಸುತ್ತಿಲ್ಲ” ಎಂಬ ಮಾದ್ಯಮಗಳ ವರದಿಗೆ ಕೇಂದ್ರ ಆಹಾರ ಸಚಿವರು, ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
“ರಾಜ್ಯ ಸರ್ಕಾರ ₹34ರ ದರದಲ್ಲಿ ಅಕ್ಕಿ ಖರೀದಿಸಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರ ₹10 ಕಡಿಮೆ ಮಾಡಿ ಕೇವಲ ₹22.50 ಬೆಲೆಗೆ ಕೊಡುತ್ತೇವೆಂದರೂ ಖರೀದಿಸಲು ಮುಂದೆ ಬಂದಿಲ್ಲ. ಕೇಂದ್ರದಿಂದ ₹22.50 ಗೆ ಅಕ್ಕಿ ಖರೀದಿಸಿದಲ್ಲಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹2,280 ಕೋಟಿ ಉಳಿತಾಯವಾಗುತ್ತದೆ. ಆದರೆ, ಇದಕ್ಕೆ ಮುಂದಾಗದ ಸಿದ್ದರಾಮಯ್ಯ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ” ಎಂದು ಜೋಶಿ ದೂರಿದ್ದಾರೆ.
“ರಾಜ್ಯಕ್ಕೆ ಎಷ್ಟು ಬೇಕಾದರೂ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂಬುದನ್ನು ಹೇಳಿದ್ದೇವೆ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಕೇಂದ್ರದಿಂದ ಅಕ್ಕಿ ಖರೀದಿಸಲು ಸಿದ್ಧವಿದ್ದಂತಿಲ್ಲ. ರಾಜ್ಯದ ಜನತೆಗೆ ಗ್ಯಾರಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ, ಯಾವುದನ್ನೂ ಸರಿ ನೀಡುತ್ತಿಲ್ಲ. ಅಕ್ಕಿ ಬದಲು ನೀಡುತ್ತಿದ್ದ ಹಣ, ಗೃಹಲಕ್ಷ್ಮಿ ಹಣ ನೀಡದೆ ರಾಜ್ಯದ ಜನತೆಗೆ ಗ್ಯಾರಂಟಿ ಮೋಸ ಮಾಡಿದೆ” ಎಂದು ಟೀಕಿಸಿದ್ದಾರೆ.
“ಮುಂದಾಲೋಚನೆ ಇಲ್ಲದ ಅವೈಜ್ಞಾನಿಕ ರೀತಿಯ ಯೋಜನೆಗಳ ಘೋಷಣೆ, ಅನುಷ್ಠಾನದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ. ಇತ್ತ, ಜನರಿಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಈ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ” ಎಂದಿದ್ದಾರೆ.