ಕಾಂಗ್ರೆಸ್ ನಾಯಕರು ಹಾಸನಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಸಿಡಿ ಬಿಟ್ರಲ್ಲಾ, ಅದೇ ತಾನೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ನವರ ಕೊಡುಗೆ? ಅದು ಬಿಟ್ಟು ಏನು ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಶಾಸಕ ಮತ್ತು ಸಹೋದರ ಹೆಚ್ ಡಿ ರೇವಣ್ಣ ಜೊತೆ ಪೂಜೆ ಸಲ್ಲಿಸಿ ಬಳಿದ ಮಾಧ್ಯಮ ಪ್ರತಿನಿಧಿಗಳು ‘ಹಾಸನಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂದು ಡಿ.ಕೆ.ಶಿವಕುಮಾರ್’ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ಹಾಸನ ಜಿಲ್ಲೆ ಅಭಿವೃದ್ಧಿ ಕಂಡಿದ್ದರೆ ಅದು ದೇವೇಗೌಡರು, ರೇವಣ್ಣ ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ. ಹಾಸನದ ಫ್ಲೈ ಓವರ್ ರೆಡಿ ಮಾಡಲು ಆಗಲಿಲ್ಲ ಇವರ ಯೋಗ್ಯತೆಗೆ” ಎಂದು ಎಂದು ಕಿಡಿಕಾರಿದರು.
“ನಾವೇನಾದರೂ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಿದರೆ ತೋರಿಸಬಹುದಿತ್ತು. ಅವರು ಸಾರ್ವಜನಿಕರ ಆಸ್ತಿ, ಸರ್ಕಾರದ ಆಸ್ತಿ, ಪ್ರಕೃತಿಯನ್ನು ಲೂಟಿ ಹೊಡೆದಿರುವುದಕ್ಕೆ ಸಾಕ್ಷಿ ಇದೆ. ನಾವು ಎಲ್ಲಿಂದ ತರೋದು ಸಾಕ್ಷಿ ಗುಡ್ಡೆನಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ವ್ಯವಸ್ಥೆ ಮಣ್ಣುಪಾಲು
“ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ತರಿಸಿದೆ. ಬಿಜೆಪಿ ಸ್ನೇಹಿತರು ಸರಿಯಾದ ರೀತಿಯಲ್ಲಿ ಕಾನೂನು ಹೋರಾಟ ಮಾಡಿದರೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ವಿರೋಧಿಗಳನ್ನು ದಮನ ಮಾಡಲು ಹೊರಟಿದ್ದಾರೆ. ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ? ಅವರು ಒಬ್ಬ ಜನಪ್ರತಿನಿಧಿ ಇದ್ದಾರೆ. ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಕರೆದುಕೊಂಡು ಬರಬಹುದಿತ್ತು” ಎಂದರು.
“ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪ್ರಕರಣವನ್ನು ಏನು ಮಾಡಿದಿರಿ? ಕಾಂಗ್ರೆಸ್ ನಾಯಕ ಗುರಪ್ಪ ನಾಯ್ಡ ಮೇಲೆ ಶಿಕ್ಷಕರೊಬ್ಬರು ದೂರು ಕೊಟ್ಟರಲ್ಲ, ಆ ದೂರು ಏನಾಯಿತು? ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಾಜಕೀಯ ವಿರೋಧಿಗಳಿಗೆ ಹೇಗೆಲ್ಲಾ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಎನ್ನುವುದಕ್ಕೆ ಕಾಂಗ್ರೆಸ್ ನವರು ವೇದಿಕೆ ಸಿದ್ಧ ಮಾಡುತ್ತಿದ್ದಾರೆ” ಎಂದರು.
ಇದು ಅನಾಗರಿಕ ಸರಕಾರ
“ಕಲಬುರಗಿಯಲ್ಲಿ ಸಿಎಂ ಅವರು ಜಯದೇಶ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಆ ಆಸ್ಪತ್ರೆಗೆ ಏನಿದೆ ಅವರ ಕೊಡುಗೆ? ನಾನು ಸಿಎಂ ಆಗಿದ್ದಾಗ ಅದಕ್ಕೆ ಚಾಲನೆ ಕೊಟ್ಟಿದ್ದೆ. ನಂತರ ಬಂದ ಬಿಜೆಪಿ ಸರಕಾರ ₹128 ಕೋಟಿ ಹಣ ಬಿಡುಗಡೆ ಮಾಡಿತ್ತು. ಜಯದೇವ ಆಸ್ಪತ್ರೆಯಿಂದ ಡಾ.ಸಿ.ಎನ್.ಮಂಜುನಾಥ್ ಅವರು ₹40 ಕೋಟಿ ಸಂಗ್ರಹಿಸಿ ಹೂಡಿಕೆ ಮಾಡಿದ್ದರು. ಹಿಂದೆ ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳುವಂತಹ ಕೃತಜ್ಞತೆ ಇಲ್ಲದಂತಹ ಅನಾಗರೀಕ ಸರಕಾರ ಇದು. ಇವರ ಕೊಡುಗೆ ಏನೂ ಇಲ್ಲ. ಈಗ ನೋಡಿದರೆ ನಿಮ್ಹಾನ್ಸ್ ಮಾಡ್ತಾರಂತೆ” ಎಂದು ಕಿಡಿಕಾರಿದರು.
“ಸದ್ಯಕ್ಕೆ ಇರುವ ಆಸ್ಪತ್ರೆಗಳನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಬಾಣಂತಿಯರು, ಮಕ್ಕಳ ಸರಣಿ ಸಾವು ಮುಂದುವರಿದೆ. ಬಹಳ ನೋವಾಗುತ್ತದೆ. ಇದನ್ನೆಲ್ಲಾ ತಡೆಯಲು ಏನು ಕ್ರಮ ತೆಗೆದುಕೊಂಡಿದ್ದೀರಿ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ನೀವು ರಾಜ್ಯ ಕಟ್ಟುತ್ತೀರಾ? ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷವಾದ ಅವಕಾಶ ಕೊಡುತ್ತೇವೆ ಎಂದು ಡಂಗೂರ ಹೊಡೆದರು. ನಿನ್ನೆಯೂ ಒಬ್ಬ ಹೆಣ್ಣುಮಗಳು ಬಳ್ಳಾರಿಯಲ್ಲಿ ಮಗುವಿಗೆ ಜನ್ಮ ಕೊಡುವಾಗ ತೀರಿಕೊಂಡಿದ್ದಾಳೆ. ಪ್ರತಿನಿತ್ಯ ಈ ಸಾವುಗಳು ಸಂಭವಿಸುತ್ತಿವೆ. ಇದ್ಯಾವುದರ ಬಗ್ಗೆ ರಾಜ್ಯ ಸರಕಾರಕ್ಕೆ ಕಿಂಚಿತ್ತೂ ಚಿಂತೆ ಇಲ್ಲ” ಎಂದು ಟೀಕಿಸಿದರು.