ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಜನರಿಗೆ ಕುಡಿಯಲು ನೀರು ಪೂರೈಸುವ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ವಿಜಯ ದಶಮಿ ವೇಳೆಗೆ ನೆರವೇರಿಸುವ ಆಲೋಚನೆಯಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ರಾಮನಗರ ಜಿಲ್ಲೆ ಹಾರೋಹಳ್ಳಿಯ ಕಾವೇರಿ ನೀರು ಪಂಪಿಂಗ್ ಸ್ಟೇಷನ್ ಬಳಿ ಮಾಧ್ಯಮ ಪ್ರತಿಕ್ರಿಯೆ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿಯ ತೊರೆಕಾಡನಹಳ್ಳಿಯ ನೀರು ಶುದ್ಧೀಕರಣ ಮತ್ತು ಪಂಪಿಂಗ್ ಸ್ಟೇಷನ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.
“ಬೆಂಗಳೂರು ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುವುದನ್ನು ತಪ್ಪಿಸಿ ಮನೆ, ಮನೆಗೂ ಕುಡಿಯುವ ನೀರು ಹರಿಸುವುದು ನಮ್ಮ ಸಂಕಲ್ಪ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಕಾವೇರಿ ನೀರು ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಈ ಯೋಜನೆ ಆರಂಭಿಸಿದೆ” ಎಂದರು.
ಮುಂದಿನ 10 ವರ್ಷ ಬೆಂಗಳೂರಿಗೆ ಕುಡಿಯುವ ನೀರಿನ ತೊಂದರೆ ಇಲ್ಲ
“ಈಗಾಗಲೇ 1,400 ಎಂಎಲ್ ಡಿ ನೀರನ್ನು ನೀಡಲಾಗುತ್ತಿದ್ದು, ಇದಕ್ಕೆ 775 ಎಂಎಲ್ ಡಿಯಷ್ಟು ನೀರು ಸೇರಿಸಲಾಗುವುದು. ಕನಿಷ್ಠ 10 ವರ್ಷ ಬೆಂಗಳೂರಿನಲ್ಲಿ ಕುಡಿಯಲು ನೀರಿನ ತೊಂದರೆ ಆಗಬಾರದು ಎಂದು ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.
5 ಸಾವಿರ ಕೋಟಿ ಮೊತ್ತದ ಯೋಜನೆ
“5ನೇ ಹಂತ ಅನುಷ್ಠಾನದ ಬಳಿಕ 4 ಲಕ್ಷ ಹೊಸ ನೀರಿನ ಸಂಪರ್ಕ ನೀಡಲಾಗುತ್ತದೆ. 5 ಸಾವಿರ ಕೋಟಿ ಮೊತ್ತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ದೇಶದ ದೊಡ್ಡ ಯೋಜನೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋ- ಆಪರೇಷನ್ ಏಜನ್ಸಿ (ಜೈಕಾ) ಸಂಸ್ಥೆ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ” ಎಂದರು.
ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ
“1 ಲಕ್ಷ 45 ಸಾವಿರ ಮೆಗಾ ಟನ್ ಸ್ಟೀಲ್ ಪೈಪ್ ಗಳನ್ನು ಈ ಯೋಜನೆಯಲ್ಲಿ ಬಳಕೆ ಮಾಡಲಾಗಿದೆ. 110 ಕಿ. ಮೀ ಉದ್ದ ಪೈಪ್ ಲೈನ್ ಅಳವಡಿಸಲಾಗಿದೆ. ಕನಕಪುರ ಬಳಿ ತಿರುವು ಮಾಡಲು ತೊಂದರೆ ಆಗಿತ್ತು. ಅದನ್ನು ಬಗೆಹರಿಸಲಾಗಿದೆ. ಇದೊಂದೇ ಹಂತದಲ್ಲಿ 775 ಎಂಎಲ್ ಡಿ ನೀರನ್ನು ಹರಿಸಲಾಗುತ್ತಿದೆ. ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ” ಎಂದು ತಿಳಿಸಿದರು.
ವರದಿ ಬಂದ ಬಳಿಕ ಕಾವೇರಿ ಆರತಿ ಪ್ರಾರಂಭ
“ಕಾವೇರಿ ಆರತಿ ಪ್ರಾರಂಭ ಮಾಡಲು ನದಿಗಳಿಗೆ ಆರತಿ ನಡೆಸುವ ಸ್ಥಳಗಳಿಗೆ ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿತ್ತು. ಆ ವರದಿ ಬಂದ ಮೇಲೆ ಪ್ರಾರಂಭ ಮಾಡಲಾಗುವುದು. ಇದು ಕೇವಲ ಪ್ರವಾಸದ ವಿಚಾರವಲ್ಲ, ಧಾರ್ಮಿಕ ವಿಚಾರ. ಮೂರು ನಾಲ್ಕು ಇಲಾಖೆಗಳು ಸೇರಿ ಕಾರ್ಯಕ್ರಮ ರೂಪಿಸುತ್ತಾ ಇದ್ದೇವೆ. ಇಡೀ ರಾಜ್ಯದಲ್ಲೇ ಅತ್ಯುತ್ತಮ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.