ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿ ಗಣತಿ ವರದಿಯನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯ ಒಕ್ಕಲಿಗರ ಸಂಘ ಈ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಲಿಂಗಾಯತ ಸೇರಿದಂತೆ ಇತರ ಸಮುದಾಯಗಳೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ನಿರ್ಧರಿಸಿದೆ.
ಕಾಂತರಾಜು ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಹೇಳಿರುವ ಸಂಘ ಇದನ್ನು ವಿರೋಧಿಸಿ ಅಗತ್ಯಬಿದ್ದರೆ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ಹೇಳಿದೆ.
ಹಿಂದುಳಿದ ವರ್ಗಗಳ ಜಾತಿಗಣತಿ ವರದಿಯನ್ನು ರಾಜ್ಯ ಸಂಪುಟ ಸಭೆ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ತುರ್ತು ಸಭೆ ನಡೆಯಿತು. ಈ ಸಭೆಯ ನಂತರ ಸಂಘದ ಎಲ್ಲ ನಿರ್ದೇಶಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, “ಏಪ್ರಿಲ್ 17ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ವರದಿಯ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
“ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳ ಹಿಂದೆ ನಡೆದ ಸಮೀಕ್ಷೆಯನ್ನು ಆದರಿಸಿ ಈಗ ವರದಿ ಸಿದ್ದಪಡಿಸಲಾಗಿದೆ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇಲ್ಲ” ಎಂದು ಹೇಳಿದರು.
ಈ ವರದಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಲಿಂಗಾಯತ, ಬ್ರಾಹ್ಮಣ ಸೇರಿ ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜ್ಯವನ್ನೇ ಬಂದ್ ಆಗುವ ರೀತಿಯಲ್ಲಿ ಹೋರಾಟ ಮಾಡುವುದಾಗಿ ಪ್ರಕಟಿಸಿದರು.
“ಇದು ಅವೈಜ್ಞಾನಿಕ ವರದಿಯಾಗಿದೆ. ಸಿದ್ದರಾಮಯ್ಯನವರಿಗಾಗಿ ತಯಾರಿಸಿದ ವರದಿಯಾಗಿದೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ನಮ್ಮ ಸಂಘ ಒಪ್ಪುವುದಿಲ್ಲ ವರದಿ ಜಾರಿಯಾದರೆ ಸರ್ಕಾರ ಬೀಳಿಸುವ ಶಕ್ತಿ ನಮ್ಮ ಸಮುದಾಯಕ್ಕಿದೆ. ಜನಾಂಗಕ್ಕೆ ಅನ್ಯಾಯವಾದರೆ ಸಂಘದ ಎಲ್ಲ ನಿರ್ದೇಶಕರು ರಾಜೀನಾಮೆ ಕೊಟ್ಟು ಬೀದಿಗೆ ಇಳಿಯುತ್ತೇವೆ” ಎಂದು ಎಚ್ಚರಿಸಿದರು.