ಒಳಮೀಸಲಾತಿ ಬಗ್ಗೆ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ಜಾತಿಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದೇ ಆದರೆ, ಹಿಂದಿನ ಅವಧಿಯಲ್ಲಿ ಕೈಸೇರಿದ್ದ ವರದಿಯನ್ನು ಅವತ್ತೇ ಅನುಷ್ಠಾನ ಮಾಡಬಹುದಿತ್ತು. ಆದರೂ ಮಾಡಲಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವನ್ನು ಶಿಕಾರಿಪುರದ ಹಲವು ಮುಖಂಡರೊಡನೆ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
“ಈಗ ಸಿಎಂ ಕುರ್ಚಿ ಅಲ್ಲಾಡುತ್ತಿರುವಾಗ ತಕ್ಷಣ ಅವರಿಗೆ ಜ್ಞಾನೋದಯ ಆಗಿದೆ. ಕ್ಯಾಬಿನೆಟ್‍ಗೆ ತಂದು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಸ್ಥಾನಕ್ಕೆ ಕುತ್ತು ಬಂದಾಗ ಮುಖ್ಯಮಂತ್ರಿಗಳು ಭಾವನಾತ್ಮಕ ರಾಜಕಾರಣ ಮಾಡುತ್ತಿರುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಡಿ ಕೆ ಶಿವಕುಮಾರ್ ಅವರೇನು ಹೇಳಿದ್ದಾರೆ? ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರೇನು ಹೇಳಿದ್ದಾರೆ? ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಏನು ಹೇಳಿದ್ದಾರೆ? ಎಲ್ಲವನ್ನೂ ತಾವು ಗಮನಿಸಬೇಕು. ರಾಜಕೀಯ ಬೇರೆ, ಆದರೆ ರಾಜಕೀಯದ ಹೊರತಾಗಿ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕಿದೆ” ಎಂದರು.
“ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ವರ್ಗ, ಸಮುದಾಯಗಳಿಗೆ ನ್ಯಾಯ ಕೊಡಬೇಕು. ಇವತ್ತು ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಅದರಿಂದ ಮತ್ತೊಬ್ಬರಿಗೆ ಅನ್ಯಾಯ ಆಗಬಾರದು. ನ್ಯಾಯಯುತವಾಗಿ ನಡೆದುಕೊಳ್ಳಬೇಕಿದೆ. ಜಾತಿಗಣತಿ ಅವೈಜ್ಞಾನಿಕ ಎಂಬುದು ಎಲ್ಲರ ಅಭಿಪ್ರಾಯ” ಎಂದು ಹೇಳಿದರು.
“ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಸಾಕಷ್ಟು ಜನ ಸಚಿವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರು ಪಾಪ ಏನೋ ಪ್ಲ್ಯಾನ್ ಜೊತೆ ಖರ್ಗೆಯವರ ಮನೆಗೆ ಹೋಗಿದ್ದರು. ಬರೇ ಬಿಲ್ಡಿಂಗ್ ಫೋಟೊ ಕಾಣುತ್ತಿತ್ತು. ಅದೇನು ಪ್ಲ್ಯಾನ್ ಎಂದು ಗೊತ್ತಾಗಿಲ್ಲ” ಎಂದು ವ್ಯಂಗ್ಯವಾಗಿ ತಿಳಿಸಿದರು.
“ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಂದು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ಬಿಜೆಪಿ ನಿರಂತರವಾಗಿ ಈ ಬಗ್ಗೆ ಆಗ್ರಹ ಮಾಡುತ್ತ ಬಂದಿದೆ. ನಮ್ಮ ವಿಚಾರಗಳು ಸ್ಪಷ್ಟ ಇದೆ” ಎಂದು ತಿಳಿಸಿದರು.
ಟೋಲ್ ವಿಚಾರವಾಗಿ ಸಚಿವರ ಭೇಟಿ
ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೇವೆ. ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಮ್ಮ ಜಿಲ್ಲೆಯಲ್ಲಿ 2 ಟೋಲ್ ಇವೆ. ಶಿಕಾರಿಪುರ ತಾಲ್ಲೂಕಿನ ಟೋಲ್ ನಿಂದ ರೈತರು, ಬಡವರಿಗೆ ಅನಾನುಕೂಲ ಆಗಿದೆ. ಮೂರು ಜಿಲ್ಲೆಗಳ ಜನರು ಈ ಹೈವೇ ಉಪಯೋಗಿಸುತ್ತಿದ್ದು, ಒಂದೇ ಜಿಲ್ಲೆಯಲ್ಲಿ 2 ಟೋಲ್ ಇವೆ. ಟೋಲ್ ವರ್ಗಾಯಿಸಿ ಬಡವರಿಗೆ ಪ್ರಯೋಜನ ದೊರಕಿಸಿಕೊಡಲು ಕೋರಿದ್ದಾಗಿ” ವಿವರಿಸಿದರು.