ನಗದು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡಿರುವುದಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ತಿಳಿಸಿದ್ದಾರೆ.
ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ ವಾಸುದೇವ ಆಚಾರ್ಯ (ಪ್ರಖ್ಯಾತ ನ್ಯಾಯಶಾಸ್ತ್ರಜ್ಞ, ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರು) ಇದ್ದಾರೆಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ ಪ್ರಸ್ತಾವನೆಯ ಪ್ರಕ್ರಿಯೆಯನ್ನು ಆರಂಭಿಸಿದ್ದು, ನಗದು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಪಕ್ಷಾತೀತವಾಗಿ 200 ಕ್ಕೂ ಹೆಚ್ಚು ಸಂಸತ್ ಸದಸ್ಯರು (ಸಂಸದರು) ಅಂಕಿತ ಹಾಕಿದ್ದಾರೆ.
ಲೋಕಸಭೆಯ 145 ಮತ್ತು ರಾಜ್ಯಸಭೆಯ 63 ಸಂಸದರು ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆ ಕೋರಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್ ನೀಡಿದ್ದರು. ರಾಜ್ಯಸಭೆಯ ಸ್ಪೀಕರ್ ಜಗದೀಪ್ ಧನಕರ್ ಅವರಿಗೆ ಸಲ್ಲಿಕೆಯಾದ ಪತ್ರಕ್ಕೆ AAP ಮತ್ತು ಇಂಡಿಯಾ ಕೂಟದ ನಾಯಕರು ಸೇರಿದಂತೆ 63 ರಾಜ್ಯಸಭಾ ಸದಸ್ಯರು ಅಂಕಿತ ಹಾಕಿದ್ದರು.
ಸಂವಿಧಾನದ 124, 217 ಮತ್ತು 218 ನೇ ವಿಧಿಗಳ ಅಡಿಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಮಹಾಭಿಯೋಗ ಪ್ರಸ್ತಾವನೆಯನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಪಕ್ಷ ಈ ಹಿಂದೆ ಹೇಳಿತ್ತು.
ಏಪ್ರಿಲ್ 8 ರ ರಾತ್ರಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಗಣನೀಯ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿತ್ತು. ನಂತರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನು ಸುಪ್ರೀಂ ಕೋರ್ಟ್ ನೀಡಿತ್ತು.
ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರು ರಾಜೀನಾಮೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಯಶವಂತ್ ವರ್ಮಾ ಅವರು ನಿರಾಕರಿಸಿದರು. ನಂತರ ಅವರನ್ನು ಅವರ ಮಾತೃ ನ್ಯಾಯಾಲಯವಾದ ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಲಾಗಿತ್ತು. ಅಲ್ಲಿ ಅವರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿಯೋಜಿಸಿರಲಿಲ್ಲ.
ನಂತರ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿದರು. ನಂತರ ಸರ್ಕಾರ ಮಹಾಭಿಯೋಗ ಪ್ರಕ್ರಿಯೆಯನ್ನು ಆರಂಭಿಸಿತು.