ವೈಯಕ್ತಿಕ ಅಧಿಕಾರದ ಆಸೆಪಟ್ಟವರು ಕೆಲವರು ಪಕ್ಷಕ್ಕೆ ಬರುತ್ತಾರೆ ಹೋಗುತ್ತಾರೆ. ನಾವು ವೈಚಾರಿಕ ಕಾರಣಕ್ಕಾಗಿ ಬಿಜೆಪಿಯಲ್ಲಿ ಇರುವುದು. ನಮ್ಮ ವೈಚಾರಿಕ ನಿಲುವಿಗೆ ಯಾವಾಗ ಧಕ್ಕೆ ಆಗುತ್ತೋ ಅವತ್ತು ಮಾತ್ರ ಬಿಜೆಪಿಯ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಂಬಿಕೆ ಕುಸಿದ ದಿನವೇ ಸಾರ್ವಜನಿಕ ಕ್ಷೇತ್ರದಿಂದ ದೂರ ಉಳಿಯುವೆ” ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ ವೈ ವಿಜಯೇಂದ್ರ ಬಗ್ಗೆ ಸಿಟಿ ರವಿ ತಮ್ಮ ಬೇಸರವನ್ನು ಮತ್ತೆ ಹೊರಹಾಕಿದ್ದಾರೆ.
ತಾವು ನಡೆದು ಬಂದ ರಾಜಕೀಯ ಹಾದಿ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹಳೆ ನೆನಪುಗಳನ್ನು ಮೆಲುಕು ಹಾಕುತ್ತ, “ನನ್ನ ಮತ್ತು ಪಕ್ಷದ ವಿಚಾರ, ಸಿದ್ದಾಂತ ಹಿಂದುತ್ವ. ನೀವು ಸಂದರ್ಭಕ್ಕೆ ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಾ ಅದಕ್ಕೆ ಸ್ವತಂತ್ರ ಇದ್ದೀರಿ. ಹಿಂದುತ್ವದ ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಇದನ್ನು ನಾನು ಬಹಳ ಸಲ ಹೇಳಿದ್ದೇನೆ” ಎಂದರು.
“ಸಿದ್ಧಾಂತಕ್ಕಾಗಿಯೇ ಹೋರಾಟ ಮಾಡಿದ್ದೇವೆ. ಸಿದ್ಧಾಂತದ ನಂಬಿಕೆ ಕಾರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ. ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.
“ಕಷ್ಟಪಟ್ಟು ಹೋರಾಟ ಮಾಡಿದ್ದೇವೆ. ಪಕ್ಷ ಕಟ್ಟಿದ್ದೇವೆ. ಇವತ್ತು ನಿಮ್ಮ ಕಣ್ಣಿಗೆ ಗುರುತಿಸಿಕೊಳ್ಳುವ ನಾಯಕ. ಅವತ್ತು ಜಾಮೀನು ಕೊಡುವುದಕ್ಕೂ ಯಾರು ಇರಲಿಲ್ಲ. ಆ ಕಾಲದಲ್ಲಿ ಹೋರಾಟ ಮಾಡಿದ್ದೇವೆ. ಅದಕ್ಕೆ ಸಿದ್ಧಾಂತ ಕಾರಣವಾಗಿತ್ತು. ಅಧಿಕಾರ ಸಿಗುತ್ತದೆ ಎಂಬ ಕನಸು ನಮಗೆ ಬಿದ್ದಿರಲಿಲ್ಲ” ಎಂದರು.
“ನಾನು ಬಿಜೆಪಿಗೆ ಸೇರಿದಾಗ ನಮ್ಮಪ್ಪ ಇದು ಯಾವ ಪಾರ್ಟಿ? ಯಾವನಿದ್ದಾನೆ? ಎಂದು ಕೇಳಿದ್ದರು. ನಾನು ಅಡ್ವಾಣಿ, ವಾಜಪೆ ಎಂದು ಅಂತ ಅಪ್ಪನಿಗೆ ಹೇಳಿದ್ದೆ. ಅಲ್ಲದೇ ರಾಜ್ಯದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಹೇಳಿದ್ದೆ. ನಿಮ್ದು ಯಾವ ಸೀಮೆ ಪಾರ್ಟಿ ಯಾವ ಕಾಲಕ್ಕೆ ಅಧಿಕಾರ ಬರುತ್ತೆ ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ಆದರೆ, ನಾವು ದೇವೇಗೌಡರ ಪಾರ್ಟಿ ಬಿಟ್ಟು ಬಿಜೆಪಿಯನ್ನು ಆರಿಸಿಕೊಂಡಿದ್ದು ಸಿದ್ಧಾಂತದ ಕಾರಣಕ್ಕಾಗಿ” ಎಂದು ತಿಳಿಸಿದರು.
ಮುರುಗೇಶ್ ನಿರಾಣಿ ಹೇಳಿಕೆಗೆ ಗರಂ ಆದ ಸಿಟಿ ರವಿ, “ನಾನು ವ್ಯಕ್ತಿಗತ ಕಾರಣಕ್ಕಾಗಿ ರಾಜಕಾರಣ ಮಾಡಿಲ್ಲ. ಹಿಂದುತ್ವಕ್ಕಾಗಿ 35 ವರ್ಷದ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿಕೊಂಡಿದ್ದೆ . ಆಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಕನಸು ಇರಲಿಲ್ಲ. ಮುರುಗೇಶ ನಿರಾಣಿ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಿ” ಎಂದು ಹೇಳಿದರು.