ಹಲವು ಲೆಕ್ಕಾಚಾರದ ಮೂಲಕ ಬಿ ವೈ ವಿಜಯೇಂದ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರುವ ಹೈಕಮಾಂಡ್, ಒಂದೇ ತೀರ್ಮಾನದಲ್ಲಿ ಹಲವು ಸಮಸ್ಯೆಗಳಿಗೆ ರಾಮಬಾಣ ಹೂಡಿದಂತೆ ಕಾಣುತ್ತಿದೆ. ಪಕ್ಷದೊಳಗಿನ ಟೀಕಾಕಾರರ ಹೆಡೆಮುರಿ ಕಟ್ಟುವ ಜೊತೆಗೆ, ಲೋಕಸಭೆ ಚುನಾವಣೆಗೆ ವೇದಿಕೆಯನ್ನು ಭರ್ಜರಿಯಾಗಿಯೇ ಸಿದ್ಧಪಡಿಸಿಕೊಳ್ಳುವ ಮುಂದಡಿ ಇಟ್ಟಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದುಕೊಂಡು, ಅಷ್ಟು ಹೀನಾಯವಾಗಿ ಸೋಲುತ್ತೇವೆ ಅಂತ ಬಹುಶಃ ಬಿಜೆಪಿ ಕೂಡ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದ ಮತದಾರರು ಕೊಟ್ಟ ಆ ಮಹಾ ತೀರ್ಪು ಅಕ್ಷರಶಃ ರಾಜ್ಯ ಬಿಜೆಪಿಯನ್ನು ಅಲುಗಾಡಿಸಿತು. ಉಳಿದ ರಾಜ್ಯಗಳಿಗಿಂತ ಕರ್ನಾಟಕ ರಾಜಕಾರಣವೇ ಬೇರೆ ಎಂಬುದನ್ನು ಚುನಾವಣೆ ಫಲಿತಾಂಶ ಸಾರಿ ಹೇಳಿತ್ತು.
ಹೀನಾಯ ಸೋಲಿಗೆ ಕಾರಣವಾದ ಒಳ ಹೊಡೆತಗಳನ್ನು ನಿಧಾನವಾಗಿಯಾದರೂ ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಘಟಕಕ್ಕೆ ಮುಂದಿನ ಸಾರಥಿ ಯಾರು ಎಂಬುದನ್ನು ಸುಧೀರ್ಘ ಆರು ತಿಂಗಳುಗಳ ಕಾಲ ಅಳೆದು ತೂಗಿ, ತುಂಬಾ ಲೆಕ್ಕಾಚಾರ ಮಾಡಿ, ಸೋಲಿನ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಲಿಂಗಾಯತ ಸಮುದಾಯದ ಯುವ ಪ್ರಭಾವಿ ನಾಯಕ ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ (ಬಿ ವೈ ವಿಜಯೇಂದ್ರ) ಅವರಿಗೆ ರಾಜ್ಯ ಕಮಲಾಧಿಪತಿ ಪಟ್ಟ ಕಟ್ಟಿದೆ.
ಈ ಮೂಲಕ ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಎಷ್ಟು ಅನಿವಾರ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ಕೇವಲ ವಿಜಯೇಂದ್ರನ ಗೆಲುವಲ್ಲ; ರಾಜ್ಯ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮುಂಚೂಣಿ ನಾಯಕ, ಮಾಸ್ ಲೀಡರ್ ಯಡಿಯೂರಪ್ಪ ಅವರ ಗೆಲುವು. ಕಾರಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ, ಅವರೆಲ್ಲರನ್ನು ಹಿಂದಿಕ್ಕಿ ಯುವ ನಾಯಕ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪ ಶಕ್ತಿ ಏನೆಂಬುದನ್ನು ಅರಿತಿರುವುದರ ಸೂಚನೆ.
ಯಡಿಯೂರಪ್ಪ ಅವರನ್ನು ಕಡಗಣಿಸಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಎಂಬ ಚರ್ಚೆಗಳು ಚುನಾವಣೆ ಫಲಿತಾಂಶದ ನಂತರ ವ್ಯಾಪಕವಾಗಿ ಕೇಳಿಬಂದಿತ್ತು. ಬಿಜೆಪಿಯ ಕೆಲವು ನಾಯಕರೇ ಇದನ್ನು ಬಹಿರಂಗವಾಗಿ ಹೇಳಿದ್ದುಂಟು. ಬಹುತೇಕ ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗಿದ್ದರ ಪರಿಣಾಮ ಬಿಜೆಪಿ ನೆಲಕಚ್ಚಿತು ಎನ್ನುವ ವಿಶ್ಲೇಷಣೆಗಳು ಬಿಜೆಪಿ ಪಾಳಯದಲ್ಲಿ ವ್ಯಕ್ತವಾಗಿದ್ದವು.
ಲಿಂಗಾಯತ ಮತಗಳು ಬಿಜೆಪಿಗೆ ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಳೆಯ ತಪ್ಪುಗಳು ಮರು ಕಳಿಸದಂತೆ ನೋಡಿಕೊಳ್ಳಲು ಬಿ ವೈ ವಿಜಯೇಂದ್ರಗೆ ಮಣೆ ಹಾಕಿರುವುದರಲ್ಲಿ ಎರಡು ಮಾತಿಲ್ಲ. ಪಂಚ ರಾಜ್ಯಗಳ ಚುನಾವಣೆ ನಡುವೆ, ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ವೇದಿಕೆಯನ್ನು ಈ ಮೂಲಕ ಭರ್ಜರಿಯಾಗಿಯೇ ಸಿದ್ಧಪಡಿಸಿಕೊಳ್ಳುವ ಮುಂದಡಿ ಇಟ್ಟಿದೆ.
ಸಂತೋಷ್ ಕೂಟಕ್ಕೂ ಕೌಂಟರ್
ಹಲವು ಲೆಕ್ಕಾಚಾರದ ಮೂಲಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರುವ ಹೈಕಮಾಂಡ್, ಒಂದೇ ತೀರ್ಮಾನದಲ್ಲಿ ಹಲವು ಸಮಸ್ಯೆಗಳಿಗೆ ರಾಮಬಾಣ ಹೂಡಿದಂತೆ ಕಾಣುತ್ತಿದೆ. ಬಿಎಸ್‌ವೈ ಹಿಡಿತದಿಂದ ಪಕ್ಷವನ್ನು ಹೊರಗೆ ತರಬೇಕು ಎಂದು ಬಿಜೆಪಿಯೊಳಗೆ ಬಿ ಎಲ್ ಸಂತೋಷ್ ಕೂಟ ಸತತವಾಗಿ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಗುಟ್ಟಾಗಿ ಉಳಿದಿಲ್ಲ. ಬಿಜೆಪಿಯಿಂದ ಬಿಎಸ್‌ವೈ ಕುಟುಂಬವನ್ನು ದೂರವಿಡುವ ವಿಚಾರವನ್ನು ಇಲ್ಲಿಗೆ ಕೈಬಿಟ್ಟರೆ ಮಾತ್ರ ರಾಜ್ಯ ಬಿಜೆಪಿಗೆ ಉಳಿಗಾಲ ಎಂಬುದನ್ನು ಯಡಿಯೂರಪ್ಪ ವಿರೋಧಿ ಕೂಟಕ್ಕೆ ಸಾರಿ ಹೇಳುವ ಮೂಲಕ, ಬಿಎಸ್‌ವೈ ಕುಟುಂಬದ ತೆಕ್ಕೆಗೆ ಮತ್ತೆ ರಾಜ್ಯ ಬಿಜೆಪಿ ಘಟಕದ ಹುದ್ದೆ ನೀಡಿ, ಪಕ್ಷದೊಳಗಿನ ಟೀಕಾಕಾರರ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದಂತೆ ಕಾಣುತ್ತಿದೆ.
ಇತ್ತ ಯಡಿಯೂರಪ್ಪ ಕೂಡ ಲಿಂಗಾಯಿತ ವೀರಶೈವ ಮಠಗಳ ವಿಶ್ವಾಸವನ್ನು ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿಕೊಂಡಿದ್ದು, ಯಾವುದೇ ಸಂದರ್ಭದಲ್ಲಿಯೂ ತಮ್ಮ ಸಮುದಾಯದ ಮೇಲಿನ ಬಿಗಿ ಹಿಡಿತವನ್ನು ವೈಯಕ್ತಿವಾಗಿ ಸಡಲಿಸಿಕೊಂಡಿಲ್ಲ. ಸದಾ ಯಡಿಯೂರಪ್ಪ ಬೆನ್ನಗೆ ನಿಂತಿರುವ ಈ ಸಮುದಾಯ ಭವಿಷ್ಯದ ನಾಯಕನ ಸ್ಥಾನದಲ್ಲಿ ಸಹಜವಾಗಿಯೇ ವಿಜಯೇಂದ್ರನನ್ನು ಕಂಡಿರಬಹುದು. ವಿಜಯೇಂದ್ರ ಪ್ರವಾಸ ಮಾಡಿದ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯುವ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಅರಿತಿರುವ ಬಿಜೆಪಿ ಹೈಕಮಾಂಡ್, ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರನನ್ನು ನೇಮಿಸಿದೆ.
ಐದು ದಶಕಗಳ ಕಾಲ ಬಿಜೆಪಿಯನ್ನು ಹೋರಾಟದ ಕಿಚ್ಚಿನಿಂದಲೇ ತಳ ಹಂತದಿಂದ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರ ನಂತರದ ಉತ್ತರಾಧಿಕಾರಿ ಯಾರು ಎನ್ನುವ ಪಕ್ಷದೊಳಗಿನ ಪ್ರಶ್ನೆಗೂ ವಿಜಯೇಂದ್ರ ಆಯ್ಕೆ ಮೂಲಕವೇ ಹೈಕಮಾಂಡ್ ಉತ್ತರ ನೀಡಿದೆ. ಜೊತೆಗೆ ಲಿಂಗಾಯತರನ್ನು ಕೈಬಿಟ್ಟಿಲ್ಲ ಎನ್ನುವ ಸಂದೇಶ ರವಾನಿಸಿದೆ. ಅಲ್ಲದೇ ಆ ಸಮುದಾಯದ ನಾಯಕರ ವಲಸೆಗೂ ತಡೆಯೊಡ್ಡುವ ತಂತ್ರ ಹೆಣೆದಿದೆ.
ಆಪರೇಷನ್ ಹಸ್ತ ತಡೆಯಲು ವಿಜಯೇಂದ್ರ `ಶಕ್ತಿ’ ಬಳಕೆ ಮಾಡಲಾಗುತ್ತಿದೆ. ಮುಂದುವರಿದು, ಈಗಾಗಲೇ ಒಕ್ಕಲಿಗ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಪಕ್ಷದೊಳಗೆ ಒಂದು ಹೆಜ್ಜೆ ಬರಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ನಾಯಕತ್ವ ಕಾಂಬಿನೇಶನ್ ಪಾಲಿಟಿಕ್ಸ್ ಮೂಲಕ ಹೆಜ್ಜೆ ಇಡಲು ಸಜ್ಜಾದಂತೆ ಕಾಣುತ್ತಿದೆ.
ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಹೊಸ ಚೈತನ್ಯ ತುಂಬುವ ಕೆಲಸ ಆಗಬೇಕಾಗಿದ್ದು, ಹಲವಾರು ಕಾರಣಗಳಿಗಾಗಿ ಕಿರಿಯ ಮತ್ತು ಹಿರಿಯ ನಾಯಕರುಗಳ ನಡುವೆ ಇರುವ ಭಿನ್ನಾಭಿಪ್ರಾಯ ಸರಿಪಡಿಸಬೇಕಿದೆ. ಲೋಕಸಭೆ ಚುನಾವಣೆ ಎದ್ದು ನಿಲ್ಲಬೇಕಿದೆ. ತಮ್ಮದೇ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗುತ್ತಿದ್ದ ಸ್ವಪಕ್ಷಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ.
ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಯಡಿಯೂರಪ್ಪ ಅವರ ಅನುಭವದ ಮಾರ್ಗದರ್ಶನ ವಿಜಯೇಂದ್ರನ ಬೆನ್ನಿಗಿರುವುದರಿಂದ ಈ ಎಲ್ಲ ಸವಾಲುಗಳನ್ನು ಎದುರಿಸುವುದು ವಿಜಯೇಂದ್ರನಿಗೆ ಕಷ್ಟವಾಗಲಾರದು. ಆದರೂ, ವೈರುದ್ಯದ ವಾತಾವರಣದಲ್ಲಿ ಬಿಜೆಪಿಯೊಳಗಿನ ಆಂತರಿಕ ಸವಾಲುಗಳನ್ನು ವಿಜಯೇಂದ್ರ ಹೇಗೆ ಎದುರಿಸಿ ಮುಂದೆ ಸಾಗುತ್ತಾರೆ ಎಂಬುದನ್ನು ಕಾದುನೋಡಬೇಷ್ಟೇ.