Homeಕರ್ನಾಟಕನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಗಳನ್ನೇ ಘಟಕವಾಗಿಸಲು ಸಂಪುಟ ಉಪಸಮಿತಿ ನಿರ್ಧಾರ: ಹೆಚ್ ಸಿ ಮಹದೇವಪ್ಪ

ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಗಳನ್ನೇ ಘಟಕವಾಗಿಸಲು ಸಂಪುಟ ಉಪಸಮಿತಿ ನಿರ್ಧಾರ: ಹೆಚ್ ಸಿ ಮಹದೇವಪ್ಪ

ಸಂಪುಟ ಉಪ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜನರ ಉದ್ಯೋಗ ಭವಿಷ್ಯಕ್ಕೆ ನ್ಯಾಯಯುತವಾಗಿ ಅನುಕೂಲ ಆಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಘಟಕವಾಗಿಸುವ ಬಗ್ಗೆ ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳ ರೂಪುರೇಷೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಭಿನ್ನ ಅಭಿಪ್ರಾಯಗಳು ಬಲವಾಗಿ ಅಸ್ತಿತ್ವದಲ್ಲಿ ಇರುವ ಸಂದರ್ಭದಲ್ಲೇ ನಮ್ಮ ಸರ್ಕಾರವು ಸುಪ್ರಿಂ ಕೋರ್ಟ್ ನ ಆದೇಶಕ್ಕೆ ಅನ್ವಯವಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಒಳ‌ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ‌ಮಾಡಿದೆ” ಎಂದಿದ್ದಾರೆ.

“101 ಪರಿಶಿಷ್ಟ ಸಮುದಾಯಗಳನ್ನು ABC ಎಂದು ವರ್ಗೀಕರಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ ನಂತರದಲ್ಲಿ ಇನ್ನಷ್ಟು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಈ ಬಗ್ಗೆ ವಿವಿಧ ಪರಿಶಿಷ್ಟ ಜಾತಿಯ ಯುವಕರು ಮತ್ತು ತಜ್ಞರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದರೆ, ಮತ್ತೆ ಕೆಲವರು ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ನ್ಯಾಯದ ಪ್ರಶ್ನೆ ಬಂದಾಗ, ಸಮಚಿತ್ತವಾಗಿ ಎಲ್ಲವನ್ನೂ ಕೇಳಿ, ಪರಾಮರ್ಶಿಸಿ, ನ್ಯಾಯವನ್ನು ನಿರ್ಧರಿಸಬೇಕಾದ್ದು ಯಾವುದೇ ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ ಎಂಬ ಸಂಗತಿಯನ್ನು ನಾನು ಸದಾ ನಂಬುತ್ತೇನೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ನೇಮಕಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಹಲವು ವಿದ್ಯಾರ್ಥಿಗಳು ಮತ್ತು ಯುವಕರು ಎತ್ತಿರುವ ತಾಂತ್ರಿಕ ಸವಾಲುಗಳು ನ್ಯಾಯಯುತವಾಗಿದ್ದು, ಒಳ ಮೀಸಲಾತಿಯ ಸಂದರ್ಭದಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದೆ” ಎಂದು ಹೇಳಿದ್ದಾರೆ.

ಸಮಸ್ಯೆ ಏನು?

ಒಳ ಮೀಸಲಾತಿ ಹಂಚಿಕೆಯಲ್ಲಿ ABC ಎಂದು ವಿಭಾಗ ಮಾಡಿ, ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ವಿಷಯ ವಿಭಾಗವಾರು( Department wise recruitment) ನೇಮಕಾತಿ ಸಂದರ್ಭದಲ್ಲಿ, ಒಂದೊಂದೇ ಹುದ್ದೆಗಳು ಇರುವೆಡೆ ಕೇವಲ ಒಳ ಮೀಸಲಾತಿ ಗುಂಪಿನ A ವರ್ಗಕ್ಕೆ ಮಾತ್ರವೇ ಉದ್ಯೋಗ ದೊರೆತು, ಮಿಕ್ಕ ಎರಡೂ ವರ್ಗವು ಅವಕಾಶದಿಂದ ವಂಚಿತರಾಗುತ್ತಾರೆ.

ಹೀಗಾಗಿ ನ್ಯಾಯ ಹಂಚಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಹಂಚಿಕೆ ಮಾಡಲಾಗಿರುವ ಒಳ ಮೀಸಲಾತಿಯ ಮೂಲ ಆಶಯಕ್ಕೇ ಇಲ್ಲಿ ಧಕ್ಕೆ ಆಗುತ್ತಿದ್ದು ಇದನ್ನು ಸರಿಪಡಿಸಬೇಕೆಂಬುದು B ಮತ್ತು C ವರ್ಗದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಬೇಡಿಕೆ ಆಗಿದೆ.

ಈ ಹಿನ್ನಲೆಯಲ್ಲಿ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಆಗ ಮೂರೂ ವರ್ಗಗಳಿಗೂ ಕೂಡಾ ಅವಕಾಶ ದೊರೆಯುತ್ತದೆ ಎಂಬುದು ಪರಿಶಿಷ್ಟ ಸಮುದಾಯಗಳ ಬೇಡಿಕೆ ಆಗಿದ್ದು, ಅದು ನ್ಯಾಯ ಸಮ್ಮತವೂ ಆಗಿದೆ.

ಈ ಹಿನ್ನೆಲೆಯಲ್ಲಿ ಸಮಾನವಾದ ನ್ಯಾಯ ಹಂಚಿಕೆಗೆ ಪರ್ಯಾಯ ಇಲ್ಲದ ಕಾರಣದಿಂದ ಇದೇ ಮಾರ್ಗದ ಅನುಸರಣೆಯು ಸೂಕ್ತವಾಗಿದ್ದು ಯಾರಿಗೂ ತೊಂದರೆ ಆಗದಂತೆ ಪರಿಶಿಷ್ಟ ಸಮುದಾಯಗಳ ಸಮಾನ ನ್ಯಾಯ ಹಂಚಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments