Homeಕರ್ನಾಟಕಸಚಿವ ಸಂಪುಟ ಸಭೆ | ಸಿಎಂಗೆ ರಾಜ್ಯಪಾಲರಿಂದ ನೋಟಿಸ್‌, ಕಾನೂನು ಹೋರಾಟದ ನಿರ್ಧಾರ

ಸಚಿವ ಸಂಪುಟ ಸಭೆ | ಸಿಎಂಗೆ ರಾಜ್ಯಪಾಲರಿಂದ ನೋಟಿಸ್‌, ಕಾನೂನು ಹೋರಾಟದ ನಿರ್ಧಾರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಸಿದಂತೆ ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್‌ ಅವರು ಸಿದ್ದರಾಮಯ್ಯಗೆ ನೋಟಿಸ್ ನೀಡಿರುವ ವಿಚಾರ ಇಂದಿನ (ಆ.1) ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗೆ ಒಳಗಾಯಿತು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯಿಂದ ಸಿಎಂಗೆ ಶೋಕಾಸ್ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ನೈತಿಕತೆಯ ಆಧಾರವಾಗಿ ಅವರು ಸಂಪುಟ ಸಭೆಯಲ್ಲಿ ಭಾಗಿಯಾಗಲಿಲ್ಲ. ಸಚಿವ ಸಂಪುಟ ಸಭೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದರು.

ಆ ನಂತರ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ಕ್ಯಾಬಿನೆಟ್ ನೇತೃತ್ವ ವಹಿಸಲು ಸಿಎಂ ನಿರ್ದೇಶನ ನೀಡಿದ್ದರಿಂದ ಡಿ ಕೆ ಶಿವಕುಮಾರ್ ನೇತೃತ್ವದದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೋಟಿಸ್​ ಹಿಂಪಡೆಯುವಂತೆ ಒತ್ತಾಯಿಸಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಾಗೆಯೇ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಹ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಈ ಹಿಂದೆ ಬಿಜೆಪಿ ನಾಯಕರ ವಿರುದ್ಧ ಸಾಕಷ್ಟು ದೂರುಗಳು ರಾಜ್ಯಪಾಲರಿಗೆ ದಾಖಲು ಆಗಿವೆ. ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವ ಕ್ರಮ ಕೈಗೊಂಡಿಲ್ಲ. ಮುಡಾ ಪ್ರಕರಣದಲ್ಲಿ ದೂರು ದಾಖಲು ಆಗಿರುವ ದಿನವೇ ನೋಟಿಸ್ ನೀಡುತ್ತಾರೆ ಎಂದರೆ ಇದೊಂದು ರಾಜಕೀಯ ಪ್ರೇರಿತ ಅಲ್ಲದೇ ಮತ್ತೇನೂ ಇಲ್ಲ ಎಂದು ಸಚಿವ ಸಂಪುಟದಲ್ಲಿ ಸಚಿವರು ಚರ್ಚಿಸಿದ್ದಾರೆ.

ಹಾಗೆಯೇ ಮೊಟ್ಟೆ ಹಗರಣಕ್ಕೆ ಸಂಬಂಧಿಸಿ ಇದೇ ರಾಜ್ಯಪಾಲರ ಮುಂದೆ ದೂರು ದಾಖಲಾಗಿತ್ತು. ಮೊಟ್ಟೆ ಪ್ರಕರಣದಲ್ಲಿ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯೂಷನ್ ಗೂ ಅನುಮತಿ ನೀಡಿಲ್ಲ, ಶೋಕಾಸ್ ನೋಟಿಸ್ ಕೂಡ ನೀಡಿರಲಿಲ್ಲ. ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದೇ ಸೂಕ್ತ ಎಂದು ಸಚಿವರು ಒಕ್ಕೊರಲಿನಿಂದ ಸಭೆಯಲ್ಲಿ ಹೇಳಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ ಎನ್‌ ರಾಜಣ್ಣ, “ಕೋಣನಿಗೆ ಕಾಯಿಲೆ ಬಂದರೆ ಎಮ್ಮೆಗೆ ಬರೆ ಹಾಕಿದ್ರಂತೆ. ಎಮ್ಮೆಗೆ ಕಾಯಿಲೆ ಬಂದ್ರೆ ಕೋಣನಿಗೆ ಬರೆ ಹಾಕಿದ ಹಾಗಾಯ್ತು. 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಸೈಟ್​ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ. ಈಗ ಗವರ್ನರ್ ಗೆಹಲೋಟ್‌ ಮುಂದೆ‌ ಎಷ್ಟು ಅರ್ಜಿಗಳು ಇವೆ? ಇದು ರಾಜಕೀಯ ಪ್ರೇರಿತ ” ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments