ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಅಲ್ಲಾಡುತ್ತಿರುವ ಸಂದರ್ಭದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅಧ್ಯಕ್ಷರನ್ನು ಓಲೈಸಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆಯ ನಾಟಕ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಕಲಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ” ನಿನ್ನೆ ಆಗಿರುವ ಸಚಿವ ಸಂಪುಟ ಸಭೆಯಿಂದ ಈ ಭಾಗದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ಭಾಗಕ್ಕೆ 5 ಸಾವಿರ ಕೋಟಿ ಕೊಡುತ್ತೇವೆ; ಇಲ್ಲಿ ಶಾಲಾ ಕಾಲೇಜು ಮಾಡುತ್ತೇವೆ. 1,100 ಕೋಟಿಯ ಪ್ಯಾಕೇಜ್ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ” ಎಂದು ಟೀಕಿಸಿದರು.
“ಒಂದು ವರ್ಷದ ಹಿಂದೆ ಕೂಡ ಇದೇ ಮಾತುಗಳನ್ನು ಹೇಳಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 1,500 ಕೋಟಿ ಕೊಟ್ಟಿದ್ದರು. ತದನಂತರ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರಕಾರವು 3 ಸಾವಿರ ಕೋಟಿ ಮತ್ತು ಬಜೆಟ್‍ನಲ್ಲಿ 5 ಸಾವಿರ ಕೋಟಿ ಅನುದಾನ ಪ್ರಕಟಿಸಿತ್ತು. ಅದನ್ನೇ ಸಿದ್ದರಾಮಯ್ಯನವರು ನಿನ್ನೆ ಪುನರುಚ್ಚಾರ ಮಾಡಿದ್ದಾರೆಯೇ ಹೊರತು, ಯಾವುದೇ ಹೊಸ ವಿಚಾರಗಳನ್ನು ಹೇಳಿಲ್ಲ” ಎಂದರು.
“ಪ್ಯಾಲೆಸ್ಟೀನ್ ಧ್ವಜ ಹಾಕಿದ್ದಷ್ಟೇ ಅಲ್ಲ; ಮೊನ್ನೆ ನಾಗಮಂಗಲದಲ್ಲಿ ಆಗಿರುವ ಘಟನೆ, ದೇಶದ್ರೋಹಿಗಳ ಅಟ್ಟಹಾಸ, ಪಾಂಡವಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಪೊಲೀಸರು ನುಗ್ಗಿರುವುದು, ದಾವಣಗೆರೆಯಲ್ಲಿ ನಡೆದ ಘಟನೆ, ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಗಮನಿಸಿದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹಿ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತಿದೆ” ಎಂದು ಆರೋಪಿಸಿದರು.
“ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರಾಗಿ ತಮ್ಮನ್ನು (ವಿಜಯೇಂದ್ರನನ್ನು) ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇನೆ. ನಾನು ನಾಯಕ ಎಂದು ಹೊರಟಿಲ್ಲ; ನಮ್ಮ ಪಕ್ಷದ ವರಿಷ್ಠರು, ಹಿರಿಯರು ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ” ಎಂದು ಹೇಳದರು.