Homeಕರ್ನಾಟಕರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಔಷಧ ಕಿಟ್‌ ವಿತರಿಸಲು ಸಂಪುಟ ಒಪ್ಪಿಗೆ

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಔಷಧ ಕಿಟ್‌ ವಿತರಿಸಲು ಸಂಪುಟ ಒಪ್ಪಿಗೆ

2025-26ನೇ ಸಾಲಿನಲ್ಲಿ ರಾಜ್ಯದ 69922 ಅಂಗನವಾಡಿ ಕೇಂದ್ರಗಳಿಗೆ ರೂ.1,500/- ಘಟಕ ವೆಚ್ಚದಲ್ಲಿ ಔಷಧ ಕಿಟ್‌ಗಳನ್ನು ಒದಗಿಸಲು, ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಒಟ್ಟು ರೂ.10.49 ಕೋಟಿ (ಕೇಂದ್ರದ ಪಾಲು ರೂ.5.93 ಕೋಟಿ ಮತ್ತು ರಾಜ್ಯ ಪಾಲು ರೂ.4.56 ಕೋಟಿಗಳ) ವೆಚ್ಚದಲ್ಲಿ ಕೆಟಿಪಿಪಿ ನಿಯಮಗಳ ಪ್ರಕಾರ ಇ-ಟೆಂಡರ್ ಮೂಲಕ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಪ್ರಮುಖ ನಿರ್ಣಯಗಳು

2025-26ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟು 2,79,688 ಸೀರೆಗಳನ್ನು ಘಟಕ ವೆಚ್ಚ ರೂ.500/- ರಂತೆ ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಸಲು ಐ.ಸಿ.ಡಿ.ಎಸ್ ಯೋಜನೆಯ 2025-26ನೇ ಸಾಲಿನ ಅನುದಾನದಿಂದ ರೂ.13.98 ಕೋಟಿಗಳ (ಕೇಂದ್ರದ ಪಾಲು ರೂ.7.91 ಕೋಟಿ ಹಾಗೂ ರಾಜ್ಯದ ಪಾಲು ರೂ.6.07 ಕೋಟಿ) ವೆಚ್ಚವನ್ನು ಭರಿಸಲು; ಸಚಿವ ಸಂಪುಟ ನಿರ್ಧರಿಸಿದೆ.

ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಮಳವಳ್ಳಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಂಜುರಾದ ನಿವೇಶನದಲ್ಲಿ ತಿರುಗಾಡುವ ರಸ್ತೆ ನಿರ್ಮಾಣವಾಗಿರುವುದರಿಂದ, ಸದರಿ ಸಂಘಕ್ಕೆ ಬದಲಿ ನಿವೇಶನ ನೀಡಲು ಪ್ರಸ್ತಾಪಿಸಲಾಗಿತ್ತು. ಪೌರಾಡಳಿತ ಮತ್ತು ಹಜ್ ಸಚಿವರು ತಿಳಿಸಿರುವಂತೆ, ಕಂಡಿಕೆ-7 (ಎ)ರ ಪ್ರಸ್ತಾವನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಲು ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ಕಲಂ 175ರನ್ವಯ ಸದರಿ ನಿವೇಶನವನ್ನು ಮಳವಳ್ಳಿ ಪುರಸಭೆಯು ಭೂಸ್ವಾಧೀನಕ್ಕೆ ಒಳಪಡಿಸಿ ಪರಿಹಾರ ಧನ ನೀಡುವುದು ಎಂದು ಸಚಿವ ಸಂಪುಟ ನಿರ್ಣಯಿಸಿದೆ.

“ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 190(2-ಎ) ರಡಿ ಸರ್ಕಾರಕ್ಕಿರುವ ಅಧಿಕಾರದಂತೆ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಲಾಗಿರುವ ನೆಲ + 2 ಅಂತಸ್ತು ಅಥವಾ Stilt + 3 ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate) ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

ನೈಋತ್ಯ ಮುಂಗಾರು 2025ರ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಹಿನ್ನೆಲೆಯಲ್ಲಿ ಸಂಭವಿಸಿದ ಸುಮಾರು 12.82 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಹೆಚ್ಚಿನ ದರಗಳಲ್ಲಿ Input Subsidy ಅನ್ನು ಪಾವತಿಸುವುದಕ್ಕೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಮಳೆಯಾಶ್ರಿತ ಬೆಳೆಗಳಿಗೆ ಚಾಲ್ತಿಯಲ್ಲಿರುವ SDRF/NDRF ಮಾನದಂಡಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ ರೂ.8,500/- ಅನ್ನು 2 ಹೆಕ್ಟೆರ್‌ಗೆ ಸೀಮಿತಗೊಳಿಸಿದ್ದು, ಮುಖ್ಯಮಂತ್ರಿಗಳು ಘೋಷಿಸಿದಂತೆ ಇನ್ಪುಟ್ ಸಬ್ಸಿಡಿಯ ದರವನ್ನು ಪ್ರತಿ ಹೆಕ್ಟೇರ್‌ಗೆ ರೂ.17,000/- ರಂತೆ 2 ಹೆಕ್ಟೆರ್‌ಗೆ ಸೀಮಿತಗೊಳಿಸಿ ಹೆಚ್ಚಿಸಲು, ನೀರಾವರಿ ಬೆಳೆಗಳಿಗೆ ಹೆಕ್ಟೇರ್‌ಗೆ ರೂ.17,000/- ಇದ್ದ ಮೊತ್ತವನ್ನು ಪ್ರತಿ ಹೆಕ್ಟೇರ್‌ಗೆ ರೂ.25,500/- ಅನ್ನು 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಹೆಚ್ಚಿಸಲಾಗಿದೆ. ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ಇದ್ದ ರೂ.22,500/- ಗಳನ್ನು ಪ್ರತಿ ಹೆಕ್ಟೇರ್‌ಗೆ ರೂ.31,000/- ಅನ್ನು 2 ಹೆಕ್ಟೇ್ಟರ್‌ಗೆ ಸಬ್ಸಿಡಿ ದರವನ್ನು ಸೀಮಿತಗೊಳಿಸಿ ಹೆಚ್ಚಿಸಲಾಗಿದೆ. ಇದಕ್ಕಾಗಿ 1090 ಕೋಟಿ ರಾಜ್ಯದ ಬೊಕ್ಕಸದಿಂದ ಭರಿಸಬೇಕಾಗುತ್ತದೆ.

ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಬೆಂಗಳೂರು ನಗರ, ಸೂರ್ಯನಗರ-4ನೇ ಹಂತ ಬಡಾವಣೆಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯಡಿ ಇಂಡ್ಲವಾಡಿ ಗ್ರಾಮದ 75 ಎಕರೆ ವಿರ್ಸ್ತಿರ್ಣದ ಜಮೀನಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೇಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣದ ಯೋಜನೆಯನ್ನು ಕರ್ನಾಟಕ ಗೃಹ ಮಂಡಳಿಯಿಂದ ಅನುಷ್ಠಾನಗೊಳಿಸುವ ಯೋಜನಾ ಮೊತ್ತ ರೂ.2350.00 ಕೋಟಿಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಮತ್ತು ವಿಸ್ತೃತವಾದ ಯೋಜನಾ ವರದಿಯ ನಂತರ ತೀರ್ಮಾನ ಕೈಗೊಳ್ಳಲು ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸಲು ತಿಳಿಸಲಾಗಿದೆ.

ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಅವಶ್ಯವಿರುವ ಉಪಕರಣಗಳನ್ನು ರೂ.54.92 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ಮೈಸೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ ರೂ.100.00 ಕೋಟಿಗಳ ಅನುದಾನದಲ್ಲಿ ಕೈಗೊಳ್ಳಲು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವ್ಯಾಸ್ಕ್ಯುಲರ್ ಶಾಸ್ತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಮುಖ್ಯ ಶಾಸ್ತ್ರಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು ಒಟ್ಟು ರೂ.26.09 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ವೃಷಭಾವತಿ ವ್ಯಾಲಿ ಸಂಸ್ಕರಣಾ ಘಟಕದ ಮರುಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ (ಯೋಜನೆಯ ಲಿಫ್ಟ್-4) ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ರೂ.650.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments