ರಾಜ್ಯದಲ್ಲಿ ಅಡಿಕೆ ತೋಟಗಳಿಗೆ ಹಬ್ಬಿರುವ ಎಲೆ ಚುಕ್ಕಿ ಮತ್ತು ಹಳದಿ ರೋಗ ಬಾಧೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಾಪ್ ಸಿಂಹ ನಾಯಕ್ ಕೆ.ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಎಲೆ ಚುಕ್ಕಿ ಮತ್ತು ಹಳದಿ ರೋಗವನ್ನು ನಿಯಂತ್ರಣ ಮಾಡಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದ್ದು, ಪರಿಹಾರ ನೀಡುವುದು ಸಾಧ್ಯವಿಲ್ಲ” ಎಂದರು.
“ಎಲೆ ಚುಕ್ಕಿ ಮತ್ತು ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೋಗ ನಿಯಂತ್ರಣಕ್ಕೆ ಔಷಧಿ ವಿತರಣೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
“ಅಡಿಕೆ ಎಲೆ ಚುಕ್ಕೆ ರೋಗದಿಂದ ಒಟ್ಟು 53,977 ಹೆಕ್ಟೇರ್ ಪ್ರದೇಶವು ಹಾನೀಡಾಗಿದೆ ಮತ್ತು ಅಂದಾಜು 110181.13 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ,ಅಡಿಕೆ ಹಳದಿ ಎಲೆ ರೋಗದಿಂದ ಒಟ್ಟು 13,767 ಹೆಕ್ಟೇರ್ ಪ್ರದೇಶ ಹಾನೀಡಾಗಿದೆ, ಅಂದಾಜು 56233.25 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ ಎಂದು ಹೇಳಿದರು.
ಅಡಿಕೆಗೆ ಹಬ್ಬಿರುವ ಎಲೆ ಚುಕ್ಕಿ ಮತ್ತು ಹಳದಿ ರೋಗ ಬಾಧೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ” ಎಂದು ಸಚಿವರು ತಿಳಿಸಿದರು.
“ಎಲೆ ಚುಕ್ಕಿ ಮತ್ತು ಹಳದಿ ರೋಗ ಬಾಧೆಯಿಂದ ಅನುಭವಿಸುತ್ತಿರುವ ರೈತರ ಸಂಕಷ್ಟವನ್ನು ಕೇಂದ್ರದ ಗಮನಕ್ಕೆ ತಂದು ನೆರವು ಪಡೆಯಲು ಪ್ರಯತ್ನಿಸಲಾಗುವುದು ಈಗಾಗಲೇ ರೋಗ ತಡೆ ಕ್ರಮಗಳಿಗೆ 21ಕೋಟಿ ಬಿಡುಗಡೆ ಮಾಡಲಾಗಿದೆ” ಎಂದು ಸದಸ್ಯರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
5,11,208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿ
“ರಾಜ್ಯದಲ್ಲಿ ತೀವ್ರ ಬರಗಾಲದಿಂದ 511208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ” ಎಂದು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಸರವಣ ಪ್ರಶ್ನೆಗೆ ಉತ್ತರಿಸಿ, “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗ ಸೂಚಿಯ ಅನ್ವಯ ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟಕ್ಕೆ ಮಳೆಯಾಶ್ರಿತ ಬೆಳೆಗಳಿಗೆ 8500 ನೀರಾವರಿ ಬೆಳೆಗಳಿಗೆ 17000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 22500 ಪರಿಹಾರ ನಿಗಧಿ ಮಾಡಲಾಗಿದೆ” ಎಂದರು.
“ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆ ಸೇರಿದಂತೆ ಬೆಳೆ ನಷ್ಟದಿಂದ ನೊಂದ ಪ್ರತಿ ರೈತರಿಗೆ ರೂ. 2000 ರಂತೆ ಇಲ್ಲಿಯವರೆಗೆ 30,24,795 ರೈತರಿಗೆ ರೂ 573.28 ಕೋಟಿ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಮುಖಾಂತರ ವಿತರಿಸಲಾಗಿರುತ್ತದೆ” ಎಂದು ಹೇಳಿದರು.
“ಕೇಂದ್ರದಿಂದ ಪರಿಹಾರ ನೀಡುವಂತೆ ಮನವಿ ಮಾಡಲಾಗಿದ್ದು,ಪರಿಹಾರದ ಹಣ ಬಂದ ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡಲಾಗುವುದು ಅದು ಒಂದು ವಾರದೊಳಗೆ ರೈತರ ಖಾತೆಗೆ ಹಣ ಸೇರುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದರು.
ರಾಜ್ಯದ ಒಂದು ಕೋಟಿಗೂ ಹೆಚ್ಚು ರೈತರು ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ, ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸದೇ ಕೂಡಲೇ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ಸರವಣ ಆಗ್ರಹಿಸಿದರು.
ಪ್ರಶ್ನೆ ಕೇಳುವ ವೇಳೆ ಆಡಳಿತ ಪಕ್ಷದ ಸಚಿವರು ಸದಸ್ಯರು ನಗುತ್ತಿದ್ದಾಗ ಆಕ್ರೋಶಗೊಂಡ ನಗುತ್ತಾ ರಾಜಕೀಯ ಮಾಡಬೇಡಿ ನಮ್ಮ ಅಹವಾಲು ಕೇಳಿ ಇದೇ ಪ್ರಶ್ನೆಯನ್ನು ನಾಲ್ಕೈದು ಬಾರಿ ಕೇಳಿದ್ದೇನೆ ಎಂದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರಿಂದ ಸೂಕ್ತ ಉತ್ತರ ಕೊಡಿಸುವ ಭರವಸೆ ನೀಡಿದರು.