ಈವರೆಗೂ 14 ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಮುನ್ನೋಟ ನೀಡುವ 2024-25ನೇ ಸಾಲಿನ ಆಯವ್ಯಯವನ್ನು ಶುಕ್ರವಾರ 10.15ಕ್ಕೆ ಮಂಡಿಸಲು ಆರಂಭಿಸಿದರು. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ.
ಸಹಜವಾಗಿ ಬಜೆಟ್ ಮಂಡನೆ ಮುನ್ನ ಮುಖ್ಯಮಂತ್ರಿಗಳು ದೇವರಿಗೆ ವಿಶೇಷ ಪೂಜೆ, ಪುನಸ್ಕಾರದಲ್ಲಿ ಭಾಗಿಯಾಗತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯೂ ಯಾವುದೇ ಪೂಜೆ ಪುನಸ್ಕಾರ, ದೇವಸ್ಥಾನ ಭೇಟಿ ನೀಡದೇ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವರು ಸೂಟ್ ಕೇಸ್ ನೊಂದಿಗೆ ಆಗಮಿಸಿವುದು ಸಂಪ್ರದಾಯವಾಗಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ತಿಲಾಂಜಲಿ ಹಾಡಿ ಬಹಿಖಾತಾದೊಂದಿಗೆ ಆಗಮಿಸಿದರು. ಈ ಬಾರಿ ಟ್ಯಾಬ್ ನೊಂದಿಗೆ ಆಗಮಿಸಿ ಬಜೆಟ್ ಮಂಡಿಸಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಲಿಡ್ಕರ್ ಬ್ಯಾಗ್ ನೊಂದಿಗೆ ಆಗಮಿಸುವ ಮೂಲಕ ಚರ್ಮ ಕೈಗಾರಿಕೆಯನ್ನು ಪ್ರೋತ್ಸಾಹವನ್ನು ಪ್ರತಿಬಿಂಬಿಸಿದರು.
10.15ಕ್ಕೆ ಬಜೆಟ್ ಓದಲು ಆರಂಭಿಸಿದ ಸಿದ್ದರಾಮಯ್ಯ ಅವರು, “ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 15ನೇ ಆಯವ್ಯಯ ಮಂಡಿಸುತ್ತಿರುವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಉದ್ದೇಶದೊಂದಿಗೆ ಈ ಬಜೆಟ್ ಮಂಡನೆ ಮಾಡುತ್ತಿದ್ದೇನೆ” ಎಂದರು.
“ಪ್ರಸಕ್ತ ಸಾಲಿನ ಬಜೆಟ್ ಗಾತ್ರ 3,71,383 ಕೋಟಿ ರೂ. ಆಗಿದ್ದು, ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. ಐದು ಗ್ಯಾರಂಟಿಗಳ ಜಾರಿಯಿಂದ ಇಡೀ ಜಗತ್ತು ರಾಜ್ಯದತ್ತ ನೋಡುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. 5 ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡದ್ದನ್ನು ನಾವು ಮಾಡಿದ್ದೇವೆ. ಬಿಟ್ಟಿ ಗ್ಯಾರಂಟಿ, ದಿವಾಳಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ರಾಜ್ಯ ಅಭಿವೃದ್ಧಿ ಮಾಡುತ್ತೇವೆ” ಎಂದು ಸಿದ್ದರಾಮಯ್ಯ ಹೇಳಿದರು.