ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರನ್ನು ಕೋಲಾರದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಸರ್ಕಾರದ ಕ್ರಮದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಶಿವಮೊಗ್ಗದ ಲೆಕ್ಕ ಪರಿಶೋಧನ ಜಂಟೀ ನಿರ್ದೇಶಕ ಕಚೇರಿಯ ಲೆಕ್ಕಾಧೀಕ್ಷಕರಾಗಿದ್ದ ಸಿ ಎಸ್ ಷಡಾಕ್ಷರಿ ಅವರನ್ನು ರಾಜ್ಯ ಸರ್ಕಾರ ಶಿವಮೊಗ್ಗದಿಂದ ವರ್ಗಾವಣೆ ಮಾಡಿದೆ.
ಕೋಲಾರದ ಸಮಾಜಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕ ಹುದ್ದೆಗೆ ಸಿ ಎಸ್ ಷಡಾಕ್ಷರಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸರ್ಕಾರದ ಕ್ರಮದ ಬಗ್ಗೆ ಪರ-ವಿರೋಧ ಚರ್ಚೆ ರಾಜಕೀಯ ಪಡಲಾಸೆ ಮತ್ತು ಸರ್ಕಾರಿ ನೌಕರರ ವಲಯದೊಳಗೆ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬಕ್ಕೆ ಆತ್ಮೀಯರಾಗಿರುವ ಸಿ ಎಸ್ ಷಡಾಕ್ಷರಿ ವಿರುದ್ಧ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗಿದೆ.
ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಲಗೆರೆ ಗ್ರಾಮದ ಸರ್ವೆ ನಂ.119ರಲ್ಲಿ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್ ಗೆ ಸಾಗಿಸಿರುವ ಆರೋಪದಲ್ಲಿ ಷಡಾಕ್ಷರಿ ನಿರ್ದೇಶನದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ” ಎಂದು ಆರೋಪಿಸಲಾಗಿದೆ.
“ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮಣ್ಣಿನ ಒಟ್ಟು ರಾಯಲ್ಟಿ ಮೊತ್ತವನ್ನು ಪಾವತಿಸದೆ ಸರ್ಕಾರದ ಬೊಕ್ಕಸಕ್ಕೆ ರೂ. 71,45,920/-ಗಳನ್ನು ನಷ್ಟ ಉಂಟು ಮಾಡಲಾಗಿದೆ. ಹಾಗೂ ಸಕ್ರಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ವರದಿ ನೀಡಿದ್ದು, ಈ ಪ್ರಕರಣದಲ್ಲಿ ಸಿ ಎಸ್ ಷಡಾಕ್ಷರಿ ನಿರ್ದೇಶನದಂತೆ ಗ್ರಾಮ ಪಂಚಾಯತ್ ಮತ್ತು ಗಣಿ ಇಲಾಖೆಯವರು ನಡೆದುಕೊಂಡಿದ್ದಾರೆ” ಎಂದು ಷಡಾಕರಿ ವಿರುದ್ಧ ಪತ್ರದಲ್ಲಿ ದೂರಲಾಗಿದೆ.
ಮಧು ಬಂಗಾರಪ್ಪ ಅವರ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಷಡಾಕ್ಷರಿ ಅವರ ವರ್ಗಾವಣೆಗೆ ಆದೇಶಿಸಿದ್ದಾರೆ. ಕೋಲಾರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಲೆಕ್ಕಾಧೀಕ್ಷಕ ಹುದ್ದೆಗೆ ಸಿ ಎಸ್ ಷಡಾಕ್ಷರಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆ ಹಿಂದೆ ರಾಜಕೀಯ ಗುದ್ದಾಟ
ಷಡಾಕ್ಷರಿ ವರ್ಗಾವಣೆ ಯ ಹಿಂದೆ ರಾಜಕೀಯ ಗುದ್ದಾಟ ಅಡಗಿದೆ ಎನ್ನುವ ವಿಶ್ಲೇಷಣೆಗಳು ವ್ಯಕ್ತವಾಗಿವೆ. ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ವಲಯದಲ್ಲಿ ಹಿಡಿತ ಇಟ್ಟುಕೊಂಡಿರುವ ಷಡಾಕ್ಷರಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಅವರ ಪರ ಪರೋಕ್ಷವಾಗಿ ಕೆಲಸ ಮಾಡುವ ಸಾಧ್ಯತೆಗಳು ಇವೆ ಎನ್ನುವ ಅನುಮಾನದ ಮೇಲೆ ಷಡಾಕ್ಷರಿ ವಿರುದ್ಧ ವರ್ಗಾವಣೆ ಅಸ್ತ್ರ ಪ್ರಯೋಗಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜುಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಹೊರಟಿದ್ದು, ಸಹೋದರಿಯ ಗೆಲುವಿನ ದಾರಿಯನ್ನು ಸುಗಮ ಮಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ಮಧು ಬಂಗಾರಪ್ಪ ಮುಂದಾದಂತೆ ಕಾಣುತ್ತಿದ್ದು, ಬಿಎಸ್‌ವೈ ಕುಟುಂಬಕ್ಕೆ ಬಹಳ ಆತ್ಮೀಯರಾಗಿರುವ ಸಿ ಎಸ್ ಷಡಾಕ್ಷರಿ ಅವರನ್ನೇ ವರ್ಗಾವಣೆ ಮಾಡಿಸುವ ಮೂಲಕ ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕಲು ರಾಜಕೀಯ ತಂತ್ರ ಹೆಣೆದಿದ್ದಾರೆ ಎನ್ನುವ ವಿಶ್ಲೇಷಣೆ ಮಾತುಗಳು ಶಿವಮೊಗ್ಗದಾದ್ಯಂತ ಧ್ವನಿಸುತ್ತಿವೆ.