ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆಯ ಪೂರ್ವಾಭ್ಯಾಸ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ರಸ್ತೆಗೆ ಬಂದ ಬಾಲಕನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ.
ಸೈಕಲ್ ತುಳಿದುಕೊಂಡು ಬರುತ್ತಿದ್ದ 17 ವರ್ಷದ ಬಾಲಕನ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆ. ಈ ಘಟನೆ ಗುರುವಾರ ಸೂರತ್‌ನ ರತನ್ ಚೌಕ್‌ನಲ್ಲಿ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಾವಲು ಪಡೆಯು ಹಾದುಹೋಗುವಾಗ ಆ ಬಾಲಕ ತನ್ನ ಸೈಕಲ್ ನಲ್ಲಿ ಹೋಗುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತರ, ಬಿ.ಎಸ್. ಗಧ್ವಿ ಎಂದು ಗುರುತಿಸಲಾದ ಪೊಲೀಸ್ ಅಧಿಕಾರಿ ಬಾಲಕನ ಕೂದಲನ್ನು ಎಳೆದು ಕಪಾಳಮೋಕ್ಷ ಮಾಡಿದ್ದಾನೆ.
ಮನೆಯಿಂದ ಹೊರಗೆ ಹೋಗಿದ್ದ ಬಾಲಕ ರಾತ್ರಿ 9:30 ಕ್ಕೆ ಅಳುತ್ತಾ ಹಿಂತಿರುಗಿದ್ದಾನೆ. ಪ್ರಶ್ನಿಸಿದಾಗ ಪೊಲೀಸರು ಹೊಡೆದಿದ್ದಾರೆ ಎಂದು ಹೇಳಿದ್ದಾನೆ. ಅವನ ಮೇಲೆ ಹಲ್ಲೆ ಮಾಡುವ ಬದಲು ತಿಳಿ ಹೇಳಬೇಕಿತ್ತು ಎಂದು ಬಾಲಕನ ಕುಟುಂಬದವರು ಹೇಳಿದ್ದು, ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಉಪ ಪೊಲೀಸ್ ಆಯುಕ್ತರಾದ(ಡಿಸಿಪಿ) ಅಮಿತಾ ವನಾನಿ ಅವರು ಗಧ್ವಿ ಕ್ರಮ ಖಂಡಿಸಿ, “ಅಧಿಕಾರಿಯ ನಡವಳಿಕೆ ಸಂಪೂರ್ಣವಾಗಿ ಅಸಮರ್ಥನೀಯವಾಗಿದ್ದು, ಇದಕ್ಕಾಗಿ ನಾವು ವಿಷಾದಿಸುತ್ತೇವೆ” ಎಂದು ಕ್ಷಮೆ ಯಾಚಿಸಿದ್ದಾರೆ.
ಮೊರ್ಬಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಗಧ್ವಿಯನ್ನು ವರ್ಗಾವಣೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಭದ್ರತಾ ವ್ಯವಸ್ಥೆಗಳಿಗೆ ನೆರವಾಗಲು ಸಬ್ ಇನ್ಸ್ ಪೆಕ್ಟರ್ ಗದ್ದಿ ಸೂರತ್ ಗೆ ತೆರಳಿದ್ದರು.