ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕೆಲ ದಿನಗಳಿಂದ ತಣ್ಣಗಿದ್ದ ಭೀಮೆಯ ಒಡಲಲ್ಲಿ ಮತ್ತೆ ರಕ್ತ ಹರಿದಿದೆ. ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಖಾಸಾ ಖಾಸಾ ಶಿಷ್ಯ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ ಹತ್ಯೆಯಾಗಿದ್ದಾನೆ.
ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಹಂತಕರು ಭೀಕರವಾಗಿ ಹತ್ಯೆಗೈದಿದ್ದಾರೆ. ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ, ಇದೀಗ ಹಂತಕರು ಆತನನ್ನು ಹುಡುಕಿಕೊಂಡು ಬಂದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಭೀಮಾತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಇಂದು ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆತನ ಎದೆ ಭಾಗಕ್ಕೆ ಗುಂಡು ಹೊಕ್ಕಿದೆ. ಪರಿಣಾಮ ಬಾಗಪ್ಪ ಹರಿಜನ್ ಸಾವನ್ನಪ್ಪಿದ್ದಾನೆ.
ಬಾಗಪ್ಪ ಹರಿಜನ್ ಭೀಮಾತೀರದ ಅತ್ಯಂತ ಶಾರ್ಪ್ ಶೂಟರ್ ಆಗಿದ್ದ. 2000 ವರ್ಷದ ಮೇ ತಿಂಗಳಲ್ಲಿ ಚಂದಪ್ಪ ಹರಿಜನ್ ಹತ್ಯೆ ನಂತರ ಭೀಮಾತೀರದಲ್ಲಿ ಬಾಗಪ್ಪ ಹರಿಜನ್ ತನ್ನದೇ ಆದ ದವಲತ್ತು ಹೊಂದಿದ್ದ.
ಚಂದಪ್ಪ ಹರಿಜನನಿಗೆ ಸಂಬಂಧಿಸಿದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಂದಪ್ಪನ ಕುಟುಂಬಕ್ಕೂ, ಬಾಗಪ್ಪನಿಗೂ ದ್ವೇಷವಿತ್ತು ಎನ್ನಲಾಗದೆ. ಅಲ್ಲದೇ ಚಂದಪ್ಪ ಹರಿಜನನ ಸಂಬಂಧಿ ಬಸವರಾಜ್ ಹರಿಜನನ ಹತ್ಯೆ ಪ್ರಕರಣದಲ್ಲೂ ಬಾಗಪ್ಪನ ಹೆಸರು ಸದ್ದು ಮಾಡಿತ್ತು. 2017ರಲ್ಲಿ ವಿಜಯಪುರ ಕೋರ್ಟ್ ಆವರಣದಲ್ಲಿ ಭಾಗಪ್ಪನ ಮೇಲೆ ಎದುರಾಗಿಗಳು ಶೂಟೌಟ್ ಮಾಡಿದ್ದರು. ಆಗ ಬಾಗಪ್ಪನ ಎಡ ಭುಜ, ಹೊಟ್ಟೆ ಸೇರಿದಂತೆ 4 ಗುಂಡುಗಳು ತಗುಲಿದ್ದವು. ಕೂಡಲೇ ಆತನ ಆಪ್ತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬಾಗಪ್ಪ ಬದುಕುಳಿದಿದ್ದ.
ಯಾರ ತಂಟೆಗೆ ಹೋಗಲ್ಲ ಅಂತ ಭೀಮೆ ಮೇಲೆ ಆಣೆ ಇಟ್ಟಿದ್ದ
ಸತತ ಚಿಕಿತ್ಸೆ ಬಳಿಕ ಸಾವಿನ ದವಡೆಯಿಂದ ಪಾರಾಗಿದ್ದ ಭಾಗಪ್ಪ ಮುಂದೆ ನಾನು ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದ್ರೆ ಬಿಡೋದಿಲ್ಲ ಅಂತ ಭೀಮೆ ಮೇಲೆ ಆಣೆ ಮಾಡಿದ್ದ. ಕೊಟ್ಟ ಮಾತಿನಂತೆ ಯಾರ ತಂಟೆಗೂ ಹೋಗದಂತೆ ಸೈಲೆಂಟಾಗಿದ್ದ ಎನ್ನಲಾಗಿದೆ.
2018ರಲ್ಲಿ ಬಾಗಪ್ಪ ಹರಿಜನ್ ಮೇಲೆ ಮತ್ತೆ ಫೈರಿಂಗ್ ನಡೆದಿತ್ತು. ಪೀರಪ್ಪ ಹಡಪದ್ ಎಂಬಾತ ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ. ಆಗ ಸುಪಾರಿ ನೀಡಿದ್ದು ಬೇರೆ ಯಾರೂ ಅಲ್ಲ, ಚಂದಪ್ಪ ಹರಿಜನ್ ಅಣ್ಣ ಯಲ್ಲಪ್ಪ ಹರಿಜನ್‌ನ ಮಕ್ಕಳು! ಆದರೆ ಆಗ ಬಚಾವಾಗಿದ್ದ ಬಾಗಪ್ಪ, ಇಂದು ಗುಂಡು ತಿಂದು ಉಸಿರು ನಿಲ್ಲಿಸಿದ್ದಾರೆ. ಆದರೆ ಈ ಹತ್ಯೆ ಮಾಡಿದವರು ಯಾರು ಎಂಬ ಪ್ರಶ್ನೆಗೆ ವಿಜಯಪುರ ಪೊಲೀಸರು ಉತ್ತರ ಹುಡುಕಬೇಕಿದೆ.