Homeಕರ್ನಾಟಕಇತಿಹಾಸ ಗೊತ್ತೊಲ್ಲದೇ ತೌಡು ಯಾಕೆ ಕುಟ್ಟುತ್ತೀರಿ: ಬೆಲ್ಲದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಇತಿಹಾಸ ಗೊತ್ತೊಲ್ಲದೇ ತೌಡು ಯಾಕೆ ಕುಟ್ಟುತ್ತೀರಿ: ಬೆಲ್ಲದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಶಾಸಕರಿಗೆ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುವುದರಲ್ಲೇ ಅತಿ ಪ್ರೀತಿ ಅನಿಸುತ್ತದೆ. ಸ್ವಾಮಿ ಅರವಿಂದ ಬೆಲ್ಲದ ಅವರೇ, ಇತಿಹಾಸದ ಗೊತ್ತು ಗುರಿ ಇಲ್ಲದೇ ಪೇಲವ ರೀತಿ ಯಾಕೆ ತೌಡು ಕುಟ್ಟುತ್ತೀರಿ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ‌ ಕೆ ಹರಿಪ್ರಸಾದ್ ಕುಟುಕಿದ್ದಾರೆ.

“ದೇಶದ ಸಂವಿಧಾನ ರಚನೆಯ ಉದ್ದೇಶ, ದೂರದೃಷ್ಟಿ ಹಾಗೂ ಬಾಬಾ ಸಾಹೇಬರ ಶ್ರಮದ ಬಗ್ಗೆ ಎಳ್ಳಷ್ಟು ತಿಳಿವಳಿಕೆಯೂ ಇಲ್ಲದೆ ಇದ್ದರೆ ನಿಮ್ಮ ಕರ್ಮ, ಆದರೆ ಕನಿಷ್ಠ ಪಕ್ಷ ಸಂವಿಧಾನ ಹಾಗೂ ತುರ್ತುಪರಿಸ್ಥಿತಿಯ ಬಗ್ಗೆ ನಿಮ್ಮ ಪಕ್ಷ ಹಾಗೂ ನಿಮ್ಮ ನಾಯಕರ ನಿಲುವುಗಳ ಇತಿಹಾಸವನ್ನಾದರೂ ಓದಬಾರದೇ” ಎಂದು ಮಾಧ್ಯಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಹಾಗೂ ನೆಹರೂ ಅವರ ಮುತುವರ್ಜಿಯಲ್ಲೇ ಬಾಬಾ ಸಾಹೇಬರಿಗೆ ನೀಡಿದ ಜವಾಬ್ದಾರಿಯಿಂದಲೇ ಜಗತ್ತಿನ ಅತೀ ದೊಡ್ಡ ಸಂವಿಧಾನ ರಚಿಸಲು ಸಾಧ್ಯವಾಗಿದೆ. ಅದಕ್ಕೆ ನಡೆದ ಚರ್ಚೆಗಳು, ಸಂವಿಧಾನ ರಚನಾ ಸಮಿತಿಯ ನಡಾವಳಿಗಳು ಕನ್ನಡದಲ್ಲೇ ಪ್ರತಿ ಸಿಗುತ್ತದೆ ಸಾಧ್ಯವಾದರೆ ಓದುವ ಹವ್ಯಾಸವಾದರೂ ರೂಢಿಸಿಕೊಳ್ಳಿ” ಎಂದು ಲೇವಡಿ ಮಾಡಿದ್ದಾರೆ.

“ಭಾರತ ಸಂವಿಧಾನ ಸ್ವೀಕರಿಸಲು ಅನರ್ಹ” ಎಂಬ  ಶೀರ್ಷಿಕೆಯಲ್ಲಿ 1949 ನವೆಂಬರ್ 30ರಂದು ಆರ್ ಎಸ್ ಎಸ್ ನ ಮುಖವಾಣಿ “ಆರ್ಗನೈಸರ್” ಪತ್ರಿಕೆಯಲ್ಲಿ  ಪ್ರಕಟವಾದ ಲೇಖನ ನೆನಪಿದೆಯೇ? ಆರ್.ಎಸ್.ಎಸ್ ನ ಅಧ್ಯಕ್ಷನಾಗಿದ್ದ ಗೋಳ್ವಾಳ್ಕರ್, ಅಂಬೇಡ್ಕರ್ ಅವರ ಸಂವಿಧಾನ ಜಾರಿಯನ್ನು ವಿರೋಧಿಸಿದ್ದ ಇತಿಹಾಸ ಅರಿವಿದೆಯೇ? ಗೋಳ್ವಾಲ್ಕರ್ ಬರೆದ ಆರ್ ಎಸ್ ಎಸ್ ನ “ಧರ್ಮಗ್ರಂಥ” “ಬಂಚ್ ಆಫ್ ಥಾಟ್ಸ್” ಕೃತಿಯಲ್ಲಿ  ಸಂವಿಧಾನ , ತ್ರಿವರ್ಣ ಧ್ವಜದ ಬಗ್ಗೆ ನಿಮ್ಮ ಪರಿವಾರದ ನಿಲುವುಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. “ನಮ್ಮದು ಎಂದು ಹೇಳಲಾಗುತ್ತಿರುವ ಈ ಸಂವಿಧಾನವು, ಪಾಶ್ಚಾತ್ಯ ದೇಶಗಳ ಸಂವಿಧಾನಗಳಿಂದ ಬೇರೆ ಬೇರೆ ಕಲಮ್ಮುಗಳನ್ನು ಹೆಕ್ಕಿತಂದು ಒಟ್ಟುಗೂಡಿಸಿದ ಕಂತೆಯಾಗಿದೆ” ಎಂದು ಹೀಗೆಳೆದಿದ್ದಾರೆ. ಈ ಪುಸ್ತಕದ ಪ್ರತಿ ಖಾಲಿಯಾಗಿದ್ದರೆ ತರಿಸಿಕೊಡುತ್ತೇನೆ. ಒಮ್ಮೆ ಓದಿ ಇದರ ನಿಲುವಿಗೆ ವಿರುದ್ಧವಾಗಿದ್ದೇನೆ ಎಂದು ಹೇಳು ಧೈರ್ಯ ಮಾಡುತ್ತೀರಾ?” ಸವಾಲು ಹಾಕಿದ್ದಾರೆ.

“ಬೆಲ್ಲದ ಅವರೇ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಹೆಸರುವಾಸಿಯಾಗಿರುವ ಸಾವರ್ಕರ್ ಭಾರತಕ್ಕೆ ಮನುಸ್ಮೃತಿಯೇ ಶ್ರೇಷ್ಠ. ಈ ದೇಶ ಮುಂದಿನ ನಡೆಗಳು‌ ಮನುಸ್ಮೃತಿಯನ್ನೇ ಅನುಸರಿಸಬೇಕು ಎಂದು 1932 ತಮ್ಮ “ಕಿರ್ಲೋಸ್ಕರ್” ಲೇಖನದಲ್ಲಿ ಬರೆದಿದ್ದಾರೆ. ಈ ನಿಲುವಿನ ವಿರುದ್ಧ ನಾನಿದ್ದೇನೆ ಎಂದು ಹೇಳುವ ಕಿಂಚಿತ್ತಾದರೂ ಧೈರ್ಯ ಉಳಿದಿದೆಯಾ” ಎಂದು ಪ್ರಶ್ನಿಸಿದ್ದಾರೆ.

“ನೆಹರೂ ಅವರ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ನಿಮ್ಮ ಸಂಘದ ಶ್ಯಾಮ ಪ್ರಸಾದ್ ಮುಖರ್ಜಿಯ ಗೃಹ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸದೆ ಸಂವಿಧಾನಕ್ಕೆ ಅಪಚಾರ ಮಾಡಿ, ಮೂರು ಸಂಖ್ಯೆಗಳು ನಮಗೆ ಅಪಶಕುನ ಎಂದಿದ್ದು ನೆನಪಿದೆಯೇ? ಭಾರತೀಯ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ನಾವ್ಯಾವತ್ತೂ ಅದನ್ನು ಗೌರವಿಸುವುದಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ. ಎಂದು 1947ರಲ್ಲಿಯೇ ಆರ್.ಎಸ್.ಎಸ್ ಮುಖವಾಣಿ ‘ದಿ ಆರ್ಗನೈಸರ್’ ಪತ್ರಿಕೆಯಲ್ಲಿ ಬರೆದುಕೊಂಡಿದ್ದರ ಪ್ರತಿ ಇದ್ದರೆ ಒಮ್ಮೆ ಓದಿಕೊಳ್ಳಿ” ಎಂದು ವಾಗ್ದಾಳಿ ನಡೆಸಿದ್ದಾರೆ.

“ತುರ್ತುಸ್ಥಿತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬೆಲ್ಲದ ಅವರಿಗೆ ತಮ್ಮ ನಾಯಕ ವಾಜಪೇಯಿಯವರು ತುರ್ತು ಪರಿಸ್ಥಿತಿ ಬೆಂಬಲಿಸಿ ಮುಚ್ಚಳಿಕೆ ಬರೆದು ಕೊಟ್ಟು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದು ನೆನಪಿಲ್ಲವೇ? ಇಡೀ ಸಂಘ ಪರಿವಾರದ ಮುಂಚೂಣಿಯ ನಾಯಕರು ತುರ್ತುಸ್ಥಿತಿ ಬೆಂಬಲಿಸಿ ನಡೆಸಿದ ಸಭೆಗಳು ಗುಪ್ತವಾಗಿ ಉಳಿಯಲು ಸಾಧ್ಯವೇ? ಈ ದಾಖಲೆಗಳು ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾಣೆಯಾಗಿದ್ದರೆ ಬಿಡುವು ಮಾಡಿಕೊಂಡು ನಿಮ್ಮದೇ ಪಕ್ಷದ ನಾಯಕ ಸುಬ್ರಮಣ್ಯ ಸ್ವಾಮಿಯವರ ಸಾಮಾಜಿಕ ಜಾಲತಾಣವನ್ನೊಮ್ಮೆ ಕಣ್ಣಾಡಿಸಿ, ಕಣ್ಣೀರಾದರೂ ಉಳಿದೀತು” ಎಂದಿದ್ದಾರೆ.

“ಸಂವಿಧಾನವನ್ನು ತಿದ್ದುಪಡಿ  ಮಾಡಲು ಸಂವಿಧಾನವೇ ನೀಡಿರುವ ಆರ್ಟಿಕಲ್ 368 ಹಕ್ಕಿನ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಆದರೆ ಬಿಜೆಪಿ ಸಂವಿಧಾನವನ್ನೇ ಬದಲಾಯಿಸುವ ನಿಲುವು ಹೊಂದಿದೆ. ಸಂವಿಧಾನ ತಿದ್ದುಪಡಿಗೂ, ಬದಲಾವಣೆಗೂ ಭಾರಿ ಅಂತರವಿದೆ. ಈ ನೆಲದ ಕಾನೂನಿಗೆ ಅತೀತರಾಗಿದ್ದೇವೆ ಜನೋಪಕಾರಿ ನಿಲುವುಗಳನ್ನು ತೆಗೆದುಕೊಳ್ಳಲು ಕಾಲ ಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಿದ್ದೇವೆ. ಕಳೆದ 75 ವರ್ಷಗಳಲ್ಲಿ 106 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. 70ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಹಾಗೂ 36ಕ್ಕೂ ಹೆಚ್ಚು ಬಾರಿ ಕಾಂಗ್ರೇಸತರ ಸರ್ಕಾರದ ಆಡಳಿತದಲ್ಲಿ ತಿದ್ದುಪಡಿಗಳಾಗಿದೆ” ಎಂದು ವಿವರಿಸಿದ್ದಾರೆ.

“ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಂವಿಧಾನದ ತಿದ್ದುಪಡಿ ಮಾಡುವುದು ಆಯಾ ಕಾಲಘಟ್ಟದ ಜನರ ಹಕ್ಕು ಮತ್ತು ಅಧಿಕಾರ” ಎಂದು ಬಾಬಾ ಸಾಹೇಬರು 1949 ಜನವರಿ 25ರ ಭಾಷಣದಲ್ಲಿಯೂ ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಅಂಬೇಡ್ಕರ್ ಭಾಷಣ ಮತ್ತು ಬರಹ ಪುಸ್ತಕದ ಪುಟಗಳನ್ನು ತಿರುವಿ ಹಾಕಿ. ಜನಪರವಲ್ಲದ, ಒಂದಿಷ್ಟು ಕಾನೂನುಗಳಿಗೆ ತೊಡಕು ಆಗಲಿದೆ ಎಂದರೆ ಅದನ್ನು ಪ್ರತಿಭಟಿಸುವ ಹಾಗೂ ವಿರೋಧ ವ್ಯಕ್ತಪಡಿಸುವ ಪ್ರಜಾಪ್ರಭುತ್ವದ ಸೌಂದರ್ಯವನ್ನು ನಮ್ಮಲ್ಲಿ ಉಳಿಸಿಕೊಂಡಿದ್ದೇವೆ. ಆದರೆ ನಾಗಪುರದ ಶಾಖೆಗಳಲ್ಲಿ ಪುಂಗಿ ಊದಿದ ರೀತಿಯಲ್ಲಿ ನಾವು ಕುಣಿಯುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

“ಕೊನೆಯದಾಗಿ ಬೆಲ್ಲದ ಅವರೇ ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿಗೆ ತರುವ ಸಂಘಪರಿವಾರದ ಹೋರಾಟಕ್ಕೆ ನಿಮ್ಮ ಬೆಂಬಲವೂ ಇದ್ದರೇ, ಕಬ್ಬನ್ನು ಹಿಂಡಿ ಹಿಪ್ಪೆ ಮಾಡಿ ನೊಣ, ಇರುವೆಗಳಂತೆ ಶೂದ್ರರು, ದಲಿತರ , ಬಹುಜನರಿಗೆ ಹಂಚುತ್ತಾರೆ. ಆಗ ಕಬ್ಬಿನ ಸಿಪ್ಪೆ ಮಾತ್ರ ನಿಮಗೆ, “ಬೆಲ್ಲ” ದ ರುಚಿ ಮಾತ್ರ ಪರಿವಾರದ್ದು ಸ್ವಲ್ಪ ಜಾಗೃತೆ ಇರಲಿ” ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments