Homeಕರ್ನಾಟಕಎರಡೂ ಉಪ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು: ವಿಜಯೇಂದ್ರ ವಿಶ್ವಾಸ

ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು: ವಿಜಯೇಂದ್ರ ವಿಶ್ವಾಸ

ಉಪ ಚುನಾವಣೆ ನಡೆಯುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಿಗೆ ಸಂಬಂಧಿಸಿ ನಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ್, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸ್ ಕರಿಯಪ್ಪ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಮತದಾರರೂ ಈ ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು, ಆ ನಿಟ್ಟಿನಲ್ಲಿ ಬಿಜೆಪಿ ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ ಎಂದು ನುಡಿದರು.
ಡಿನ್ನರ್ ರಾಜಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಆರೆಂಟು ತಿಂಗಳುಗಳಿಂದ ಆಡಳಿತ ಪಕ್ಷದ ಆಂತರಿಕ ಕಚ್ಚಾಟ, ಬೇಗುದಿಯನ್ನು ನಾವು ನೋಡುತ್ತಿದ್ದೇವೆ. ಅದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮೊನ್ನೆ ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕರ ಜೊತೆ ಮಾತನಾಡಿದ ವೇಳೆ, ನಿಶ್ಚಿತವಾಗಿ ಒಂದು ಫಲಿತಾಂಶ ಬರಲಿದೆ; ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸದ ಮಾತನ್ನು ಅವರು ಆಡಿದ್ದಾರೆ. ಆದರೆ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದು ಯಕ್ಷಪ್ರಶ್ನೆ. ಅವರಿಂದಲೇ ಉತ್ತರ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಂಚಾಯತ್‍ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಕುರಿತು ಮೊನ್ನೆಯೂ ಸದನದಲ್ಲಿ ಒತ್ತಾಯ ಮಾಡಿದ್ದೇವೆ. ಪಂಚಾಯಿತಿಯಿಂದ ಸಂಸತ್ತಿನವರೆಗೆ ಕಲ್ಯಾಣ ಕರ್ನಾಟಕ ಯಾರ ಹಿಡಿತದಲ್ಲಿದೆ ಎಂಬುದು ನಿಮಗೆ ಗೊತ್ತಿದೆ. ಆದರೂ ಅಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಮತ್ತೊಂದು ಕಡೆ ಪಂಚಾಯತ್‍ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇದರ ಪರಿಣಾಮ ಏನೆಂದರೆ, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಕೇಂದ್ರದಿಂದ ಬರಬೇಕಾದ ಕನಿಷ್ಠ 14-15 ಸಾವಿರ ಕೋಟಿ ರೂ. ಬಂದಿಲ್ಲ. ರಾಜ್ಯ ಸರಕಾರದ ಧೋರಣೆ ರಾಜ್ಯದ ಹಿನ್ನಡೆಗೆ ಕಾರಣ ಆಗಿದೆ ಎಂದು ಸ್ಪಷ್ಟವಾಗಿದೆ ಎಂಬುದಾಗಿ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಇರುವ ಕಾರಣ ಪ್ರತಿವರ್ಷ 14-15 ಸಾವಿರ ಕೋಟಿ ರೂ. ಲುಕ್ಸಾನು ಆಗುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು. ಈಗಲಾದರೂ ದೇವರು ಬುದ್ಧಿ ಕೊಟ್ಟು ಚುನಾವಣೆಗೆ ರಾಜ್ಯ ಸರಕಾರ ಮುಂದಾಗಲಿ ಎಂದು ಆಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments