ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಗರೇ ಮೊದಲು ವಿಜಯೇಂದ್ರ ಅವರಿಂದ ರಾಜಿನಾಮೆ ಕೊಡಿಸಿ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕರ ರಾಜೀನಾಮೆ ಕೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ಮೇಲ್ಮನೆಯ ವಿರೋಧ ಪಕ್ಷದ ನಾಯಕರು ಸಹ ಸಿಎ ಸೈಟ್ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ. ಇವರೆಲ್ಲರ ರಾಜೀನಾಮೆ ಕೇಳಿ, ನಂತರ ನಮ್ಮ ಸಿಎಂ ಬಗ್ಗೆ ಮಾತನಾಡಿ” ಎಂದು ತಿರುಗೇಟು ನೀಡಿದರು.
“ಚುನಾವಣಾ ಆಯೋಗಕ್ಕೆ ವಿಜಯೇಂದ್ರ ಅವರು ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 16.09. 2022 ರಂದು ಲೋಕಾಯುಕ್ತದಿಂದ ಇವರ ಮೇಲೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಸೆಕ್ಷನ್ 7 A, 9, 10, 13 ಹಾಗೂ 383, 384, 415, 418, 420 ಕಾಯ್ದೆಗಳಡಿ ದೂರು ದಾಖಲಿಸಲಾಗಿದೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಇವರಿಗೆ ಸಮನ್ಸ್ ಜಾರಿಯಾಗಿದೆ. ಮೊದಲು ಇವರ ರಾಜೀನಾಮೆ ಕೇಳಿ” ಎಂದರು.
ವಿಜಯೇಂದ್ರ ನಾಯಕತ್ವಕ್ಕೆ ಪ್ರಶ್ನೆ
“ಬಿಜೆಪಿಗರೇ ಮೂರು ಕಡೆ ಸಭೆ ನಡೆಸಿ ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಇವರ ನಾಯಕತ್ವವನ್ನು ಯಾರೂ ಸಹ ಒಪ್ಪಿಕೊಂಡಿಲ್ಲ. ಈಶ್ವರಪ್ಪ ಅವರು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದವರೇ ನಿಮಗೆ ಮರ್ಯಾದೆ ಕೊಡುತ್ತಾರೆ. ಬಿಜೆಪಿಯ ನೀತಿ ಪಾಠ ನೋಡಿದರೆ ನರಿಗಳು ನ್ಯಾಯ ಹೇಳಿದಂತೆ ಭಾಸವಾಗುತ್ತದೆ” ಎಂದು ಕುಟುಕಿದ್ದಾರೆ.
“ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂದು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದು ಇದೇ ಬಿಜೆಪಿಯವರು. 2010ರಲ್ಲಿ ಔಟ್ ಲುಕ್ ಪತ್ರಿಕೆಯ ಮುಖಪುಟದಲ್ಲಿ ಯಡಿಯೂರಪ್ಪ ಅವರ ಫೋಟೊ ಹಾಕಿ ಕರ್ನಾಟಕದ ಮರ್ಯಾದೆ ಹರಾಜು ಹಾಕಲಾಗಿತ್ತು. ಭ್ರಷ್ಟ ಇತಿಹಾಸ ಹೊಂದಿರುವ ಬಿಜೆಪಿಯವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಕರ್ನಾಟಕ ಮರ್ಯಾದೆ ತೆಗೆದವರು ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.