ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಖಂಡಿಸಿ, ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ಘೋಷಿರುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ಇಲ್ಲ ಎಂದು ಕಡ್ಡಿ ಮುರಿದಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಮಂದೆ ಬಂದು ಸ್ಪಷ್ಟಪಡಿಸಿದ್ದರು.
ಆದರೆ ಶುಕ್ರವಾರ ಯೂ ಟರ್ನ್ ಹೊಡೆದಿರುವ ಜೆಡಿಎಸ್, ತನ್ನ ಅಧಿಕೃತ ಎಕ್ಸ್ ತಾಣದಲ್ಲಿ ಬಿಜೆಪಿ ಪಾದಯಾತ್ರೆಗೆ ಬೆಂಬಲ ಸೂಚಿಸಿ ಪೋಸ್ಟ್ ಮಾಡಿದೆ. ಆದರೆ, ಈವರೆಗೂ ಪಾದಯಾತ್ರೆ ವಿರೋಧಿಸಿದ ಕುಮಾರಸ್ವಾಮಿಯಾಗಲಿ ಅಥವಾ ಜೆಡಿಎಸ್ ಪ್ರಮುಖ ನಾಯಕರಾಗಲಿ ಯಾರೂ ಕೂಡ ಬಿಜೆಪಿ ಪಾದಯಾತ್ರೆಗೆ ತಮ್ಮ ಪಕ್ಷದ ಬೆಂಬಲ ಇದೆ ಎಂದು ಎಲ್ಲೂ ಘೋಷಿಸಿಲ್ಲ.
ಬಿಜೆಪಿ ಪಾದಯಾತ್ರೆಗೆ ಬೆಂಬಲ ಸೂಚಿಸಿ ಜೆಡಿಎಸ್ ಮಾಡಿರುವ ಪೋಸ್ಟ್ ಕುಮಾರಸ್ವಾಮಿ ಗಮನಕ್ಕೆ ಬಾರದೇ ಪ್ರಕಟಗೊಂಡಿದೆಯಾ? ಇದಕ್ಕೆ ಪಕ್ಷದ ನಾಯಕರೇ ಉತ್ತರಿಸಬೇಕಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ “ಮೈಸೂರು ಪಾದಯಾತ್ರೆಗೆ ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಕೆಂಗೇರಿಯಿಂದ ಪಾದಯಾತ್ರೆ ಹೊರಡಲಿದೆ” ಎಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸುತ್ತಾರೆ.
ಜೆಡಿಎಸ್-ಬಿಜೆಪಿ ನಾಯಕರು ಒಂದೇ ವೇದಿಕೆಗೆ ಬಂದು ನಾವು ಒಗ್ಗಟ್ಟಿನಿಂದ ಪಾದಯಾತ್ರೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಕೊಂಡಿಲ್ಲ.
ಜೆಡಿಎಸ್ ಏನು ಪೋಸ್ಟ್ ಮಾಡಿದೆ?
“ಸಾಲು ಸಾಲು ಹಗರಣಗಳ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಲ್ಲಿ ಅಕ್ರಮವಾಗಿ ಸೈಟುಗಳನ್ನು ಪಡೆದು, ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ್ದಾರೆ. ವಾಲ್ಮೀಕಿ ನಿಗಮ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಹಣ ನುಂಗಿದ್ದಾರೆ. ಈ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಜನ ಜಾಗೃತಿ ಮೂಡಿಸಲು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಜೊತೆಗೂಡಿ ಬೃಹತ್ ಪಾದಯಾತ್ರೆ ನಡೆಸುತ್ತಿವೆ. ಬೆಂಗಳೂರಿ ನಿಂದ ಮೈಸೂರಿನವರೆಗೂ ನಡೆಯುವ “ಮೈಸೂರು ಚಲೋ” ಪಾದಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ, ಕರ್ನಾಟಕವನ್ನು ಉಳಿಸಿ” ಎಂದು ಜೆಡಿಎಸ್ ಕರೆ ನೀಡಿದೆ.
ಬಿಜೆಪಿ ನಾಯಕರು ಮನವೊಲಿಸಿದರೇ?
ಕುಮಾರಸ್ವಾಮಿ ಯಾವಾಗ ಪಾದಯಾತ್ರೆಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರೋ ಎದ್ನೋ ಬಿದ್ನೋ ಎಂದು ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಸಂಸತ್ ಭವನದ ಎಚ್ ಡಿ ಕುಮಾರಸ್ವಾಮಿ ಅವರ ಕಚೇರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಧಮೋಹನ್ ದಾಸ್, ಬಿ ವೈ ವಿಜಯೇಂದ್ರ ದಾವಿಸಿ ಪಾದಯಾತ್ರೆ ಬಗ್ಗೆ ಚರ್ಚೆ ನಡೆಸಿದರು.
ಆ ಚರ್ಚೆಯಲ್ಲಿ ಕುಮಾರಸ್ವಾಮಿ ಪಾದಯಾತ್ರೆಗೆ ಒಪ್ಪಿದರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಬಿಜೆಪಿ ನಾಯಕರಿಂದ ಯಾವುದೇ ಸ್ಪಷ್ಟ ಉತ್ತರ ದೊರಕಲಿಲ್ಲ. ಪ್ರಲ್ಹಾದ್ ಜೋಶಿ ಮಾತನಾಡುತ್ತ, “ನಾವು ಪಾದಯಾತ್ರೆಗೆ ಯಾರನ್ನೂ ಆಹ್ವಾನಿಸುವುದಿಲ್ಲ. ಭ್ರಷ್ಟಾಚಾರ ವಿರೋಧಿಸಿ ಭಾಗಿಯಾಗುವವರು ಬರಬಹುದು” ಎಂದು ಹೇಳಿಕೆ ನೀಡಿದರು.
ಜೋಶಿ ಮಾತಿನ ಅರ್ಥ ಎಂತಹ ಸಣ್ಣ ಮಕ್ಕಳಿಗಾದ್ರೂ ಅರ್ಥವಾಗುತ್ತೆ, ಕುಮಾರಸ್ವಾಮಿ ಪಾದಯಾತ್ರೆಗೆ ಒಪ್ಪಿಲ್ಲ ಅಥವಾ ಷರತ್ತು ವಿಧಿಸಿ ಕಳುಹಿಸಿರಬಹುದು ಎಂದು.
ಕುಮಾರಸ್ವಾಮಿ ಮೊದಲು ಹೇಳಿದ್ದೇನು?
“ದೇವೆಗೌಡರ ಕುಟುಂಬಕ್ಕೆ ವಿಷ ಇಟ್ಟ ಪ್ರೀತಂಗೌಡನ ಜೊತೆ ನಾವು ವೇದಿಕೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲ. ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಪಾದಯಾತ್ರೆಗೆ ಕರೆಯುತ್ತೀರಾ? ಪೆನ್ ಡ್ರೈವ್ ಗಳನ್ನು ಹಂಚಿವರು ಯಾರು ಎಂದು ಗೊತ್ತಿಲ್ಲವೇ? ಚುನಾವಣಾ ಮೈತ್ರಿಯೇ ಬೇರೆ. ರಾಜಕೀಯವೇ ಬೇರೆ” ಎಂದು ಕಿಡಿಕಾರಿದ್ದರು.
“ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ.ಟಿ.ದೇವೇಗೌಡರ ಅಧ್ಯಕ್ಷತೆಯ ಕೋರ್ ಕಮಿಟಿ ಬೆಂಗಳೂರಿನಲ್ಲಿ ಮಂಗಳವಾರ ತೀರ್ಮಾನ ಮಾಡಿದೆ. ಬಿಜೆಪಿ ನಾಯಕರು ಪಾದಯಾತ್ರೆ ಮಾಡಬೇಕು ಎಂದು ನಿರ್ಧಾರ ಕೈಗೊಂಡು ಸಿದ್ಧತೆ ಮಾಡುತ್ತಿದ್ದಾರೆ. ಆದರೆ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು.
ಪಾದಯಾತ್ರೆ ಸುತ್ತ ಬೆಳವಣಿಗೆಗಳನ್ನು ಗಮನಿಸಿದಾಗ “ಎತ್ತು ಏರಿಗೆ ಎಳೀತು, ಕೋಣ ಕೆರೆಗೆ ಇಳೀತು” ಎನ್ನುವಂತಾಗಿದೆ ಬಿಜೆಪಿ-ಜೆಡಿಎಸ್ ನಾಯಕರ ನಡೆ. ಮೈತ್ರಿಯಲ್ಲಿ ಒಗ್ಗಟ್ಟಿಲ್ಲ ಎಂಬುದು ಎದ್ದು ಕಾಣುತ್ತಿದೆ.


