ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಡಿಲ್ಲ. ಬದಲಿಗೆ ಭಾಷಣವನ್ನು ಮಂಡಿಸಿ, ವಿಧಾನಮಂಡಲದಿಂದ ನಿರ್ಗಮಿಸಿದ್ದಾರೆ. ಒಂದು ಸಾಲಿನ ವೈಯಕ್ತಿಕ ಭಾಷಣವನ್ನು ಮಂಡಿಸಿ ರಾಜ್ಯಪಾಲರು ವಿಧಾನಮಂಡಲದಿಂದ ನಿರ್ಗಮಿಸಿದರು.
ಇದರಿಂದ ಕೆರಳಿದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಎದುರು ನಿಂತು ನೀವು ಭಾಷಣವನ್ನು ಪೂರ್ತಿಯಾಗಿ ಓದಿ ಹೋಗಬೇಕೆಂದು ಆಗ್ರಹಿಸಿದರು. ಈ ವೇಳೆ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಬಿ.ಕೆ.ಹರಿಪ್ರಸಾದ್ ಅವರ ಪಕ್ಕಕ್ಕೆ ಸರಿಸಿ ರಾಜ್ಯಪಾಲರಿಗೆ ಮುಂದೆ ಹೋಗಲು ದಾರಿ ಮಾಡಿಕೊಡಲು ಯತ್ನಿಸಿದ್ದರು. ಗಲಾಟೆ ವೇಳೆ ಬಿ.ಕೆ.ಹರಿಪ್ರಸಾದ್ ಅವರ ಬಿಳಿ ಜುಬ್ಬಾದ ಕೆಳ ಭಾಗವನ್ನು ಹರಿದ ಘಟನೆ ನಡೆಯಿತು.
ಬಿಜೆಪಿ ಸದಸ್ಯರೇ ಹಿಂದಿನಿಂದ ತಮ್ಮ ಜುಬ್ಬಾವನ್ನು ಹರಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಯಲ್ಲಿರುವ ಅಧಿಕಾರ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಟ್ಟು ಮಧ್ಯಪ್ರದೇಶಕ್ಕೆ ವಾಪಸ್ ಹೋಗಬೇಕು ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
“ಸಂವಿಧಾನದ ಆರ್ಟಿಕಲ್ 176 ಪ್ರಕಾರ, ರಾಜ್ಯಪಾಲರು ರಾಜ್ಯ ವಿಧಾನಮಂಡಲದ ಮೊದಲ ಅಧಿವೇಶನದಲ್ಲಿ ವಿಶೇಷ ಭಾಷಣ ಮಾಡಬೇಕು ಎಂದು ಕಡ್ಡಾಯಗೊಳಿಸುತ್ತದೆ. ಅವರು ಭಾಷಣ ಓದಲು ನಿರಾಕರಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದ ಪ್ರಗತಿ ಮತ್ತು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ರಾಜ್ಯಪಾಲರ ಸ್ಥಾನಮಾನಕ್ಕೆ ಮಸಿ ಬಳಿಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇರುವ ವವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಭದ್ರತಾ ಪಡೆ ಮತ್ತು ಬಿಜೆಪಿ ಶಾಸಕರು ನನ್ನ ಬಟ್ಟೆ ಹರಿದಿದ್ದಾರೆ. ನನ್ನ ಮೇಲೆ ಕೈ ಮಾಡುವ ಹಂತಕ್ಕೆ ಕೂಡ ಬಂದಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೊಡುವಷ್ಟು ಹೇಡಿ ನಾನಲ್ಲ. ಅವರಿಗೆ ಸೂಕ್ತ ಉತ್ತರ ಕೊಡುತ್ತೇನೆ” ಎಂದರು.


