ಜಾತಿ ವಿಷ ಬೀಜ ಬಿತ್ತಿ ಮತ ಪಡೆಯುವ ಕಾಂಗ್ರೆಸ್ ತಂತ್ರ ಇನ್ಮುಂದೆ ನಡೆಯಲ್ಲ. ಈಗಾಗಲೇ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಹಾಲು ಜೇನಿನಂತೆ ಒಂದಾಗಿದ್ದು, ಕೂಡಿ ಕೆಲಸ ಮಾಡುತ್ತಿದ್ದೇವೆ, ನಮ್ಮನ್ನು ಬೇರ್ಪಡಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, “ವಾತಾವರಣ ನಮಗೆ ತುಂಬಾ ಅನುಕೂಲಕರವಾಗಿದ್ದು, ಎಲ್ಲೆಡೆ ಮೋದಿ ಮೋದಿ ಘೋಷಣೆ ಕೇಳುತ್ತಿದೆ. ದೇವೇಗೌಡರು ಸಹ ರಾಜ್ಯದಲ್ಲಿ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ. ಕಾರಜೋಳ 2 ಲಕ್ಷ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ನನಗೀಗ 82ವರ್ಷ. ದೇವರು ಶಕ್ತಿಕೊಟ್ಟರೆ ಇನ್ನೊಂದು ವಿಧಾನಸಭೆ, ಲೋಕಸಭೆ ಚುನಾವಣೆ ಮಾಡುತ್ತೇನೆ” ಎಂದರು.
“ಭದ್ರಾ ಯೋಜನೆಗೆ 5.300ಕೋಟಿ ಈವತ್ತಲ್ಲ, ನಾಳೆ ಬರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದ ತಡವಾಗಿರಬಹುದು. ಮೋದಿ, ಅಮಿತ್ ಶಾ ಜೊತೆ ಮಾತಾಡಿ ಶೀಘ್ರ ಅನುದಾನ ತರುತ್ತೇವೆ” ಎಂದು ತಿಳಿಸಿದರು
“ಕಿಸಾನ್ ಸಮ್ಮಾನ್ ಯೋಜನೆ ಅಡಿ 4ಸಾವಿರ ರೂ.ಕೊಡುವುದನ್ನು ಸಿದ್ಧರಾಮಯ್ಯ ಸರ್ಕಾರ ನಿಲ್ಲಿಸಿದೆ. ಇದಷ್ಟೇ ಅಲ್ಲ, ದುಡ್ಡಿಲ್ಲದೆ ಕಾಂಗ್ರೆಸ್ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆ, ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆ ನಿಲ್ಲಿಸಿದೆ” ಎಂದು ವಾಗ್ದಾಳಿ ನಡೆಸಿದರು.
“ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳಗೆ ಗೆಲ್ಲಿಸಿದರೆ ನನಗೆ ಗೆಲ್ಲಿಸಿದಂತೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಕಾಂಗ್ರೆಸ್ ಹೇಳಲಿ, ಆದರೆ ಮೋದಿ ಎದುರು ಮತ್ತೊಂದು ಹೆಸರು ಹೇಳುವ ಧೈರ್ಯ ಅವರಿಗಿಲ್ಲ” ಎಂದು ಹೇಳಿದರು.
ಬೇಡ ಎಂದರೂ ಸ್ಪರ್ಧೆ
ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, “20ವರ್ಷದಿಂದ ನನ್ನನ್ನು ಒಡಹುಟ್ಟಿದ ಸಹೋದರನಂತೆ ಬಿಎಸ್‌ವೈ ಕಂಡಿದ್ದಾರೆ. ನಾನು ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಕಾರಣ. ನಾನು ಬೇಡ ಅಂದರೂ ಬಿಎಸ್‌ವೈ ಮತ್ತು ವರಿಷ್ಠರು ಸ್ಪರ್ಧೆಗಿಳಿಸಿದ್ದಾರೆ. ಯಾವ ಜನ್ಮದ ರುಣಾನುಬಂಧವೋ ಗೊತ್ತಿಲ್ಲ. ಬಸವಣ್ಣನ ನಾಡಿನಲ್ಲಿ ಹುಟ್ಟಿ ಚಿತ್ರದುರ್ಗಕ್ಕೆ ಬಂದಿದ್ದೇನೆ. ಈ ಕ್ಷೇತ್ರದ ಜನರ ರುಣ ನನ್ನ ಮೇಲಿದೆ, ಆ ರುಣ ತೀರಿಸಲು ಭಗವಂತ ಅವಕಾಶ ನೀಡಿದ್ದಾನೆಂದು” ಮಾರ್ಮಿಕವಾಗಿ ಹೇಳಿದರು.