ವಿರೋಧ ಪಕ್ಷಗಳನ್ನು ಸದೆಬಡಿದು ಮತ್ತೇ ಅಧಿಕಾರಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಆದರೆ, ಇಷ್ಟುದಿನ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿ ಆಸಕ್ತಿ ತೋರಿಸಿರುವುದು ಯಾಕೆ. ಆದಾಯ ತೆರಿಗೆ ಇಲಾಖೆಯವರು ಈಗ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದರ ಅರ್ಥವೇನು? ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಯಾವ ಉದ್ದೇಶಕ್ಕಾಗಿ ಸೀಜ್ ಮಾಡಲಾಗಿತ್ತು” ಎಂದು ಪ್ರಶ್ನಿಸಿದರು.
“ಎಲೆಕ್ಟ್ರೋಲ್ ಬಾಂಡ್ಸ್ ಕೊಡಬಹುದು, ಹಣ ಕೊಡುವಂತಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಚುನಾವಣೆ ಆಯೋಗ ಅನುಮತಿ ನೀಡಿತ್ತು. ಎಲ್ಲ ಪಾರ್ಟಿಯವರು ಎಲೆಕ್ಟ್ರೋಲ್ ಬಾಂಡ್ಸ್‌ಗಳನ್ನು ಡೊನೆಷನ್ ಮಾದರಿಯಾಗಿ ತೆಗೆದುಕೊಂಡರು. ಈಗ ಎಲೆಕ್ಟ್ರಾಲ್ ಬಾಂಡ್ಸ್ ತೆಗೆದುಕೊಂಡಿರುವುದು ತಪ್ಪು ಎನ್ನಲಾಗುತ್ತಿದೆ. ಬಿಜೆಪಿಯವರು ಹೆಚ್ಚು ಬಾಂಡ್ಸ್‌ಗಳನ್ನು ತೆಗೆದುಕೊಂಡಿದ್ದು, ರೂ. 8200 ಕೋಟಿ ಗೂ ಹೆಚ್ಚು ತೆಗೆದುಕೊಂಡಿದ್ದಾರೆ. ನಮ್ಮ ಪಾರ್ಟಿಗೆ ರೂ. 1800 ಕೋಟಿ ಬಂದಿದೆ” ಎಂದರು.
“ಬಿಜೆಪಿಯವರು ರೂ. 8200 ಕೋಟಿ ಪೈಕಿ, 6600 ಕೋಟಿ ರೂ ಲೆಕ್ಕ ಕೊಟ್ಟಿದ್ದು, ಬಾಕಿ ಹಣದ ಲೆಕ್ಕ ತೋರಿಸಿಲ್ಲ. ಇದಕ್ಕಿದ್ದಂತೆ 1800 ಕೋಟಿ ರೂ. ಟ್ಯಾಕ್ಸ್ ಕಟ್ಟವಂತೆ ನಮ್ಮ ಪಕ್ಷಕ್ಕೆ ನೋಟಿಸ್ ಕೊಡುವುದಾದರೆ, ಬಿಜೆಪಿಯವರು ಲೆಕ್ಕ ತೋರಿಸಿರುವ 6600 ಕೋಟಿ ರೂ. ಗೂ ನೋಟಿಸ್ ನೀಡಲಿ. ಬರೀ ಕಾಂಗ್ರೆಸ್‌ನವರಿಗೆ ನೋಟಿಸ್ ನೀಡಿರುವುದು, ರಾಜಕೀಯ ದುರುದ್ದೇಶ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಕೋಲಾರದಲ್ಲಿ ಎರಡು ಗುಂಪು ಆಗಿರುವುದು ನಿಜ. ಇನ್ನೂ ಸಮಯ ಇದೆ. ಒಟ್ಟಾಗಿ ಕೆಲಸ ಮಾಡುತ್ತಾರೆ. ಕೋಲಾರದಲ್ಲಿ ಈಗಲೂ ಒಳ್ಳೆಯ ವಾತಾವರಣವಿದ್ದು, ಯಾರಿಗೆ ಟಿಕೆಟ್ ಕೊಟ್ಟರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ” ಎಂದು ಭರವಸೆ ವ್ಯಕ್ತಪಡಿಸಿದರು.