ಬಿಜೆಪಿಯವರು ಮುಸ್ಲಿಂ ಬಾಂಧವರಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ದೇಶದಿಂದ ಓಡಿ ಹೋಗಬೇಕು ಹಾಗೇ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, “ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ, ಯಾವುದೇ ಕ್ರಿಮಿನಲ್ ಆಕ್ಟಿವಿಟಿಗೆ ನಾವು ಉತ್ತೇಜನ ಕೊಡಲ್ಲ. ಶಾಂತಿಯಿಂದ ನಡೆಸಿಕೊಂಡು ಹೋಗುತ್ತೇವೆ” ಎಂದರು.
ನೇಹಾ ಕೊಲೆ ವಿಚಾರದಲ್ಲಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಅವರಿಗೆ ಬೇರೆ ಯಾವುದೇ ವಿಚಾರ ಇಲ್ಲ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿದೆ. ದೊಡ್ಡ ಇಂಜಿನ್ ಕೂಡ ಫೇಲ್ ಆಗಲಿದೆ” ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ಜಾಹೀರಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, “ಸದ್ಯ ನಮ್ಮ ಚೊಂಬು ಜಾಹೀರಾತಿನಿಂದ ಅಷ್ಟು ಎಚ್ಚರಿಕೆ ಆಗಿದೆಯಲ್ಲ. ದೇವೇಗೌಡರೇ ಖಾಲಿ ಚೊಂಬು ತೋರಿಸಿ ನಿಮ್ಮಿಂದ ಅನ್ಯಾಯ ಆಯ್ತು ನಮಗೆ ಎಂದಿದ್ದಾರೆ. ನಮಗೆ ಮಾತನಾಡುವುದಕ್ಕೆ ಶಕ್ತಿ ಇಲ್ಲ ಅಂತ ದೇವೇಗೌಡ್ರು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ. ಅವರು ಸಾರ್ವಜನಿಕರಿಗೆ ಏನು ಬೇಕಾದ್ರು ಹೇಳಬಹುದು. ಈ ಹಿಂದೆ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತಾ ದೇವೇಗೌಡರು ಕುಮಾರಸ್ವಾಮಿ ಭಾಷಣ ಮಾಡಿದ್ದು ಮರೆತರಾ” ಎಂದು ಪ್ರಶ್ನಿಸಿದರು.
ಬಿ ವೈ ವಿಜಯೇಂದ್ರ ವಾಗ್ದಾಳಿ
ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, “ನಾವು ಮುಸ್ಮಿಮರ ವಿರುದ್ಧ ಮಾತನಾಡುತ್ತಿಲ್ಲ. ನಾವು ದೇಶ ದ್ರೋಹಿಗಳು, ಕೊಲೆಗಡುಕರ ಬಗ್ಗೆ ಮಾತನಾಡುತ್ತಿದ್ದೇವೆ. ಅಲ್ಪ ಸಂಖ್ಯಾತ ತುಷ್ಠೀಕರಣ ಮಾಡುತ್ತಿರುವವರ ವಿರುದ್ಧ ನಮ್ಮ ಬೇಸರ. ಅಂತಹವರ ರಕ್ಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ” ಎಂದರು.