ಸಂವಿಧಾನದ ಮೂಲ ಅಡಿಪಾಯ ಎಂದರೆ ಒಬ್ಬ ವ್ಯಕ್ತಿ, ಒಂದು ಮತ ಎಂಬುದು. ಈ ಪವಿತ್ರ ಗ್ರಂಥದ ಮುಖಾಂತರ ಒಂದು ಮತದ ಹಕ್ಕನ್ನು ನೀಡಲಾಗಿದೆ. ಕಳೆದ ಚುನಾವಣೆ ವೇಳ ಬಿಜೆಪಿಯ ಮುಖಂಡರು, ನರೇಂದ್ರ ಮೋದಿ ಅವರು, ಕಾರ್ಯಕರ್ತರು ಪವಿತ್ರ ಸಂವಿಧಾನದ ಮೇಲೆ ದಾಳಿ ಮಾಡಿದರು. ಭಾರತದ ಅಸ್ಮಿತೆಯನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ “ಮತಗಳ್ಳತನ”ದ ವಿರುದ್ದ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿ, “ಪವಿತ್ರವಾದ ಗ್ರಂಥ ಸಂವಿಧಾನದಲ್ಲಿ ಭಾರತದ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಇದರಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ನೆಹರು, ಸರ್ದಾರ್ ಪಟೇಲ್ ಅವರ ಧ್ವನಿ ಇದರಲ್ಲಿದೆ. ಸಂವಿಧಾನದಲ್ಲಿ ಬಸವಣ್ಣ, ನಾರಾಯಣಗುರುಗಳ, ಜ್ಯೋತಿಬಾ ಫುಲೆ ಅವರ ದನಿ ಇದರಿಂದ ಕೇಳಿಬರುತ್ತದೆ” ಎಂದರು.
“ಲೋಕಸಭಾ ಚುನಾವಣೆ ನಂತರ ಹಾಗೂ ಮಹಾರಾಷ್ಟ್ರ ಚುನಾವಣೆ ನಂತರ ನಮ್ಮ ಮುಂದೆ ಒಂದು ಪ್ರಶ್ನೆ ಉದ್ಬವಿಸಿತು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯು ಅಭುತಪೂರ್ವ ಯಶಸ್ಸು ಗಳಿಸಿತ್ತು. ಇದಾಗಿ ನಾಲ್ಕು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಇದರಿಂದ ನಮಗೆ ಆಶ್ಚರ್ಯ ಉಂಟಾಯಿತು. ಈ ವೇಳೆ ನಾವು ಅಕ್ರಮವನ್ನು ಪತ್ತೆ ಹಚ್ಚಿದೆವು. ಸುಮಾರು 1 ಕೋಟಿಗೂ ಅಧಿಕ ಮತದಾರರು ಹೊಸದಾಗಿ ಮತ ಹಾಕಿದ್ದರು. ಇವರುಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ” ಎಂದರು
“ನಮ್ಮ ಮೈತ್ರಿಯ ಮತಗಳು ಒಂದುಚೂರು ಕಡಿಮೆಯಾಗಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಾವು ಎಷ್ಟು ಮತ ಪಡೆದಿದ್ದೆವೋ ವಿಧಾನಸಭೆಯಲ್ಲೂ ಅಷ್ಟೇ ಮತಗಳನ್ನು ಪಡೆದಿದ್ದೆವು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ ಮತಗಳೆಲ್ಲವೂ ಬಿಜೆಪಿ ತೆಕ್ಕೆ ಸೇರಿದ್ದವು. ಇಲ್ಲಿ ಏನೋ ಗೋಲ್ ಮಾಲ್ ನಡೆಯುತ್ತಿದೆ ಇದನ್ನು ಹೊರಗೆಡವಬೇಕು ಎಂದು ಅಂದು ನಾವು ತೀರ್ಮಾನ ಮಾಡಿದೆವು. ಕರ್ನಾಟಕದಲ್ಲಿ ನಾವು ನಡೆಸಿದ ಆಂತರಿಕ ಸಮೀಕ್ಷೆ ವೇಳೆ 15-16 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅಂದಾಜಿಸಿದ್ದೆವು. ನಮ್ಮ ಸಮೀಕ್ಷೆ ಸ್ಪಷ್ಟವಾಗಿತ್ತು. ಆದರೆ ಫಲಿತಾಂಶ ಹೊರ ಬಂದಾಗ ನಾವು ಗೆದ್ದಿದ್ದು ಕೇವಲ 9 ಸ್ಥಾನಗಳು ಮಾತ್ರ. ಆಗ ಗೊತ್ತಾಯಿತು ನಾವು ಸೋಲಲು ಇಂತಹ ಅಕ್ರಮಗಳೇ ಕಾರಣ” ಎಂದು ಹೇಳಿದರು.
“ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಿ ಎಂದು ಚುನಾವಣಾ ಆಯೋಗದ ಬಳಿ ಪದೇ, ಪದೇ ಮನವಿ ಮಾಡುತ್ತಿದ್ದೆವು. ಕೊನೆಗೆ ಕಾನೂನನ್ನೇ ಬದಲಾವಣೆ ಮಾಡಿಬಿಟ್ಟರು. ಮತಗಟ್ಟೆಯಲ್ಲಿ ಮಾಡಿದ್ದ ಚಿತ್ರೀಕರಣದ ವಿಡಿಯೋಗಳನ್ನು 45 ದಿನಗಳಲ್ಲಿ ಅಳಿಸುವ ಕೆಲಸ ಮಾಡಿದೆ ಚುನಾವಣಾ ಆಯೋಗ. ಈ ಎಲ್ಲ ಬೆಳವಣಿಗೆಗಳು ಆದ ನಂತರ ನಾವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಪರಾಮರ್ಶನೆ ಮಾಡಲು ತೊಡಗಿದೆವು. ಈ ಕ್ಷೇತ್ರ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿ ನೋಡಿದಾಗ ಅಲ್ಲಿ ನಡೆದಿರುವ ಅಕ್ರಮಗಳನ್ನು ನಿಮ್ಮ ಮುಂದೆ ಗುರುವಾದಂದು ಇಟ್ಟಿದ್ದೇನೆ. ಇಲ್ಲಿ ಶೇ.100 ರಷ್ಟು ಅಕ್ರಮ ನಡೆದಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಚುನಾವಣಾ ಆಯೋಗ ಬಿಜೆಪಿಯ ಜೊತೆ ಸೇರಿ ಅಕ್ರಮವಾಗಿ ಗೆದ್ದಿದೆ” ಎಂದು ಗಂಭೀರವಾಗಿ ಆರೋಪಿಸಿದರು.
“ಮಹದೇವಪುರದಲ್ಲಿ ಸುಮಾರು 6.5 ಲಕ್ಷ ಮತಗಳಿವೆ. ಇದರಲ್ಲಿ 1,00,250 ಮತಗಳನ್ನು ಕಳ್ಳತನ ಮಾಡಲಾಗಿದೆ. ಅಂದರೆ ಆರು ಮತಗಳಲ್ಲಿ ಒಂದು ಮತಗಳನ್ನು ಕದ್ದಿದ್ದಾರೆ. ಐದು ವಿಧಾನದಲ್ಲಿ ಮತಗಳ್ಳತನ ನಡೆದಿದೆ. ಒಬ್ಬ ಮತದಾರ 4 ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾನೆ. ಈ ರೀತಿ ಸುಮಾರು 12 ಸಾವಿರ ಮತಗಳಿವೆ. ನಕಲಿ ವಿಳಾಸ ಹೊಂದಿರುವ ಮತದಾರರು 40,009 ಇದ್ದರೆ, ಒಂದೇ ವಿಳಾಸ ಹೊಂದಿರುವ 10,452 ಇದ್ದಾರೆ, ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತ ಫೋಟೊಗಳನ್ನು ಹೊಂದಿರುವವರು 4,132 ಇದ್ದಾರೆ. ಸಣ್ಣ, ಸಣ್ಣ ಪೋಟೋಗಳನ್ನು ಹಾಕಿದ್ದಾರೆ. ಈ ಪೋಟೋಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿವೆ. ಒಂದು ಬೆಡ್ ರೂಮ್ ಇರುವ ಮನೆಯಲ್ಲಿ 50- 60 ಜನ ವಾಸ ಇದ್ದಾರೆ ಎಂದು ಹೇಳಲಾಗಿದೆ. ಆ ವಿಳಾಸಕ್ಕೆ ನಾವು ಹೋದಾಗ ಆ ಮನೆಯಲ್ಲಿ ಯಾರೋಬ್ಬರೂ ಇರಲಿಲ್ಲ. ಆ ಮನೆ ಯಾರದ್ದು ಎಂದು ಹುಡುಕಿದರೆ ಅದು ಬಿಜೆಪಿ ಮುಖಂಡನಿಗೆ ಸೇರಿದ ಮನೆಯಾಗಿತ್ತು. ನಕಲಿ ಮತದಾರದ ಚೀಟಿ ಹೊಂದಿರುವ ಮತದಾರ ಕರ್ನಾಟಕದಲ್ಲಿಯೂ ಮತ ಹಾಕಿ ನಂತರ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮತ ಹಾಕಿದ್ದಾನೆ. ಬೆಂಗಳೂರು, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಿದ್ದಾರೆ” ಎಂದು ವಿವರಿಸಿದರು.
“ಚುನಾವಣಾ ಆಯೋಗ ನನ್ನ ಬಳಿಯಿಂದ ಈ ಎಲ್ಲಾ ಆರೋಪಗಳಿಗೆ ಪ್ರಮಾಣಪತ್ರ ಕೇಳುತ್ತಿದೆ. ನಾನು ಈ ಸಂವಿಧಾನ ಮೇಲೆ ನಮ್ಮ ಸಂಸತ್ತಿನಲ್ಲಿ ಪ್ರಮಾಣ ಮಾಡಿದ್ದೇನೆ ನಾನು ನುಡಿಯುವುದೆಲ್ಲವೂ ಸತ್ಯ ಎಂದು. ಚುನಾವಣಾ ಆಯೋಗದ ಅಕ್ರಮಗಳನ್ನು ಹೊರಗರ ಹಾಕಿದ ನಂತರ ಈ ದೇಶದ ಜನರು ಆಯೋಗಕ್ಕೆ ವೆಬ್ ಸೈಟ್ ಮೂಲಕ ಪ್ರಶ್ನೆ ಮಾಡತೊಡಗಿದರು. ಆದರೆ ಈ ಆಯೋಗ ತನ್ನ ವೆಬ್ ಸೈಟನ್ನೇ ಬಂದ್ ಮಾಡಿಕೊಂಡು ಕುಳಿತಿದೆ. ಬೇರೆ, ಬೇರೆ ರಾಜ್ಯ ಸೇರಿದಂತೆ ಬಿಹಾರದ ಚುನಾವಣಾ ಆಯೋಗದ ವೆಬ್ ಸೈಟನ್ನೇ ಬಂದ್ ಮಾಡಲಾಗಿದೆ. ಚುನಾವಣಾ ಆಯೋಗದ ನಾಟಕ ಹೊರಗೆ ಬರುತ್ತದೆ, ಜನ ಪ್ರಶ್ನೆ ಮಾಡಲು ತೊಡಗುತ್ತಾರೆ ಎಂದು ಅವರಿಗೆ ಭಯ ಆವರಿಸಿದೆ” ಎಂದು ಹೇಳಿದರು.