Homeಕರ್ನಾಟಕಯತ್ನಾಳ್ ಆರೋಪಕ್ಕೆ ಬಿಜೆಪಿ ಬೆದರಿದೆ: ಸಚಿವ ಎಂ ಬಿ ಪಾಟೀಲ ತಿರುಗೇಟು

ಯತ್ನಾಳ್ ಆರೋಪಕ್ಕೆ ಬಿಜೆಪಿ ಬೆದರಿದೆ: ಸಚಿವ ಎಂ ಬಿ ಪಾಟೀಲ ತಿರುಗೇಟು

ಬಿಜೆಪಿಯ ಬಸನಗೌಡ ಪಾಟೀಲ‌ ಯತ್ನಾಳ್ ಅವರು ತಮ್ಮ ಪಕ್ಷದ ವಿರುದ್ಧವೇ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದರೂ ಆ ಪಕ್ಷದವರು ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶವಿರಬಹುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಹೇಳಿದರು.

ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿ ಆರೋಪಿಸುತ್ತಿರುವ ಬಗ್ಗೆ ಶುಕ್ರವಾರ ಪತ್ರಕರ್ತರು ಪ್ರಶ್ನಿಸಿದಾಗ ಹೀಗೆ ತಿರುಗೇಟು ನೀಡಿದರು.

“ಯತ್ನಾಳ್ ಅವರು ಐದು ವರ್ಷಗಳಿಂದಲೂ ತಮ್ಮ ಪಕ್ಷದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಆದರೆ, ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾರದಷ್ಟು ದುರ್ಬಲವಾಗಿದೆ. ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾಗಿಲ್ಲ” ಎಂದು ತಿಳಿಸಿದರು.

“ಯತ್ನಾಳ್ ಅವರಿಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ. ಆದರೆ ಬಿಜೆಪಿಯವರು ತಮ್ಮ ಸಮಾಧಾನಕ್ಕೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಬಹುಶಃ, ಬಿಜೆಪಿ ಸರ್ಕಾರದ ಅವಧಿಯ ಅವ್ಯವಹಾರಗಳ ಬಗ್ಗೆ ಯತ್ನಾಳ್ ಅವರ ಹತ್ತಿರ ಮಾಹಿತಿ ಇರುವುದರಿಂದಲೇ ಅವರು ಹಿಂದೇಟು ಹಾಕುತ್ತಿರಬಹುದು” ಎಂದರು.

“ಬಿಜೆಪಿ ಸರ್ಕಾರವಿದ್ದಾಗ ಕೊರೋನಾ ಸಂದರ್ಭದಲ್ಲಿ ನಡೆದ ಖರೀದಿ ಮತ್ತಿತರ ವ್ಯವಹಾರಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಿ ವಾಸ್ತವವನ್ನು ಜನರ ಮುಂದಿಡುವ ಕೆಲಸ ಮಾಡುತ್ತದೆ. ಯಾರಿಂದಲಾದರೂ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

“ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಕನ್ನಡ ನಾಮಫಲಕ ಬಳಸಬೇಕೆಂದು ಕ.ರ.ವೇ. ಕಾರ್ಯಕರ್ತರು ಹೋರಾಟ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ನಿಯಮದ ಪ್ರಕಾರ ಕನ್ನಡ ಬಳಸಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ, ಯಾರೂ ಏಕಾಏಕಿ ಕಾನೂನನ್ನು ತಮ್ಮ ಕೈಗೆ ಎತ್ತಿಕೊಳ್ಳಬಾರದು” ಎಂದರು.

“ಉದ್ಯಮಗಳ ಸ್ಥಾಪನೆಗೆ ಭಾರತದ ರಾಜ್ಯಗಳೂ ಸೇರಿದಂತೆ ಜಗತ್ತಿನೆಲ್ಲೆಡೆ ಪೈಪೋಟಿ ಇದೆ. ಉದ್ಯಮಿಗಳಿಗೆ ಯಾವುದೇ ರಾಜ್ಯವೂ ಅನಿವಾರ್ಯವಲ್ಲ. ಇಂತಹ ಘಟನೆಗಳು ನಡೆದಾಗ ಅವು ಎಲ್ಲಾ ಕಡೆ ವೈರಲ್ ಆಗಿ ನಮ್ಮಲ್ಲಿ ಬಂಡವಾಳ ಹೂಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕನ್ನಡಪರ ಹೋರಾಟಗಾರರು ಇದರ ಬಗ್ಗೆಯೂ ಗಮನಹರಿಸಬೇಕು” ಎಂದು ಕಿವಿಮಾತು ಹೇಳಿದರು.

“ನಮ್ಮ ಇಲಾಖೆಗೆ ಒಳಪಟ್ಟ ವ್ಯಾಪ್ತಿಯಲ್ಲಿ ಕೈಗಾರಿಕೆಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಲಹಾಸೂಚಿ (ಅಡ್ವೈಸರಿ) ಹೊರಡಿಸಲಾಗುವುದು” ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments