Homeಕರ್ನಾಟಕಕಾರ್ಮಿಕ ಇಲಾಖೆಯಲ್ಲಿ ನೂರಾರು ಕೋಟಿ ಅವ್ಯವಹಾರ: ಬಿಜೆಪಿ ಆರೋಪ

ಕಾರ್ಮಿಕ ಇಲಾಖೆಯಲ್ಲಿ ನೂರಾರು ಕೋಟಿ ಅವ್ಯವಹಾರ: ಬಿಜೆಪಿ ಆರೋಪ

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಳೆದ 2 ವರ್ಷಗಳಿಂದ ನೂರಾರು ಕೋಟಿ ಅವ್ಯವಹಾರ ನಡೆಸಿರುವ ಸಚಿವ ಸಂತೋಷ್ ಲಾಡ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ನೂರಾರು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆಗೊಳಿಸದರು.

“ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸುಳ್ಳು ತಪಾಸಣೆಯ ದಾಖಲೆಗಳನ್ನು ನೀಡಿದ್ದಾರೆ. ತಪಾಸಣೆ ನಡೆಸದೇ ಇಡೀ ರಾಜ್ಯದಿಂದ ಅಂದಾಜು 300 ಕೋಟಿಗಿಂತ ಹೆಚ್ಚು ಹಣವನ್ನು ಪಡೆದು ಸರ್ಕಾರ ಲೂಟಿ ಹೊಡೆದಿದೆ. ಕಾರ್ಮಿಕ ಕಳ್ಳನಲ್ಲ್ಲ, ಕಾರ್ಮಿಕ ಸಚಿವ ಕಳ್ಳಾನಾ?” ಎಂದು ಪ್ರಶ್ನಿಸಿದರು.

“ಕಟ್ಟಡ ಕಾರ್ಮಿಕರ ನಿಗಮಕ್ಕೆ ಸಾವಿರಾರು ಕೋಟಿ ಹಣವನ್ನು ಸೆಸ್ ಮೂಲಕ ಸಂಗ್ರಹ ಮಾಡಿ, ಅದನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತದೆ. ಈ ಪೈಕಿ ಕಾರ್ಮಿಕರಿಗೆ 20 ಆರೋಗ್ಯ ತಪಾಸಣೆ ಮಾಡಲು ಮಂಡಳಿ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿಯಂತೆ 67 ಸಾವಿರ ಕಾರ್ಮಿಕರಿಗೆ ಒಟ್ಟು 19 ಕೋಟಿ 74 ಲಕ್ಷ ರೂಗಳನ್ನು ಖರ್ಚು ಮಾಡಿರುವ ಬಗ್ಗೆ ತಿಳಿಸಿರುತ್ತಾರೆ” ಎಂದು ಅವರು ವಿವರಿಸಿದರು.

“ಹೋಟೆಲ್‍ನಲ್ಲಿ ಇಡ್ಲಿ, ಸಾಂಬಾರ್ ಮತ್ತು ಚಟ್ನಿಗೆ ಬೇರೆ ಬೇರೆ ದರ ನಿಗದಿ ಮಾಡಿದರೆ ಹೇಗಿರುತ್ತದೋ ಹಾಗೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ದರ ನಿಗದಿಪಡಿಸಿ ಹಣವನ್ನು ಡ್ರಾ ಮಾಡಿ ಅವ್ಯವಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ನಿಗದಿ ಪಡಿಸಿರುವ ಆರೋಗ್ಯ ತಪಾಸಣೆ ವೆಚ್ಚಕ್ಕಿಂತ ಒಂದುವರೆ ಪಟ್ಟು ಜಾಸ್ತಿ ನಿಗದಿ ಪಡಿಸಿ ತಪಾಸಣೆಯ ಹಣವನ್ನು ಪಾವತಿ ಮಾಡಿದ್ದಾರೆ” ಎಂದು ದೂರಿದರು.

“ಇಲಾಖೆ ನೀಡಿರುವ ಮಾಹಿತಿಯಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಚಿತ್ರದುರ್ಗ ಜಿಲ್ಲೆಯ 5 ಕಾರ್ಮಿಕರ ಸಂಘಟನೆಗಳ ಪೈಕಿ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿರುವ ಕಟ್ಟಡ ಕಾರ್ಮಿಕರ ಸಂಖ್ಯೆ ಕೇವಲ 6 ಸಾವಿರ. ಆದರೆ ಸರ್ಕಾರದ ಲೆಕ್ಕದಲ್ಲಿ 33,500 ಕಟ್ಟಡ ಕಾರ್ಮಿಕರ ವಿವರ ಇರುತ್ತದೆ” ಎಂದರು.

“ಮಂಡಳಿಯು 15 ದಿನಗಳ ಕ್ಯಾಂಪ್ ಮಾಡಿ 33500 ಜನಕ್ಕೂ ತಪಾಸಣೆ ಮಾಡಿದ್ದು, ಒಬ್ಬ ಕಾರ್ಮಿಕನಿಗೆ 2,940 ರೂ ಮೊತ್ತದಂತೆ ಆರೋಗ್ಯ ತಪಾಸಣೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ. ತಪಾಸಣೆ ಮಾಡಿರುವ ಆಸ್ಪತ್ರೆಯ ಮುದ್ರೆ ಮತ್ತು ಸಹಿ ಇರುವುದಿಲ್ಲ. ಮಂಡಳಿ ನಿಗದಿಪಡಿಸಿರುವ 20 ಟೆಸ್ಟ್ ಆರೋಗ್ಯ ತಪಾಸಣೆಯಲ್ಲಿ ಸುಮಾರು 16 ಟೆಸ್ಟ್‍ಗಳು ರಕ್ತ ಸಂಬಂಧಿಸಿದಂತೆ ಇದೆ. ಆದರೆ ಒಂದು ಬಾರಿ ಮಾಡುವ ರಕ್ತದ ಟೆಸ್ಟ್ ಅನ್ನು ಒಂದೊಂದು ಟೆಸ್ಟ್‍ಗಳಿಗೆ ಪ್ರತ್ಯೇಕ ಟೆಸ್ಟ್ ದರವನ್ನು ತೋರಿಸುವ ಮೂಲಕ ಅವ್ಯವಹಾರ ಮಾಡಿದ್ದಾರೆ” ಎಂದು ದೂರಿದರು.

“ಚಿತ್ರದುರ್ಗ ಜಿಲ್ಲೆಗೆ 19 ಕೋಟಿ 74 ಲಕ್ಷ ರೂ ಹಣವನ್ನು ಡ್ರಾ ಮಾಡಿ ಆಸ್ಪತ್ರೆಗಳಿಗೆ ಕೊಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಕಾರ್ಮಿಕರು ಮತ್ತು ಅವರ ಮಕ್ಕಳಿಗೂ ಇದರ ಲಾಭ ಸಿಗಬೇಕು ಎಂದು ಹೇಳಿ 7, 9, 14 ಮತ್ತು 15 ವರ್ಷದ ಕಾರ್ಮಿಕರ ಮಕ್ಕಳ ಹೆಸರಿಗೂ ತಪಾಸಣೆಯನ್ನು ಮಾಡಿದ್ದಾರೆ. ಆದರೆ 60 ವರ್ಷದ ವ್ಯಕ್ತಿಗೆ ಮಾಡುವ ತಪಾಸಣೆಯನ್ನು 9 ವರ್ಷದ ಮಗುವಿಗೂ ಮಾಡಿದ್ದೇವೆ ಎಂದು ತಪಾಸಣೆಯ ಹಣ ಪಡೆದಿದ್ದಾರೆ” ಎಂದರು.

ಬಿಜೆಪಿ ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್, ಮೋಹನ್ ವಿಶ್ವ, ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಜೇಶ್ ವೆಂಕಟೇಶ್, ಸಹ-ಸಂಚಾಲಕ ಎನ್.ಜಿ. ಸಚಿನ್ ಗೌಡ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments