ಬಿಹಾರ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆ ಪಡೆದಿರುವ ನಿತೀಶ್ ಕುಮಾರ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಹಾರ ದೀರ್ಘಾವಧಿ ಸಿಎಂ ಅವಧಿ ಕೊನೆಗೊಳ್ಳಲಿದ್ದು, ಮುಂದಿನ ಸಿಎಂ ಯಾರು ಎಂಬ ಕುತೂಹಲ ಗರಿಗೆದರಿದೆ.
ನಿತೀಶ್ ಕುಮಾರ್ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರೊಂದಿಗೆ ಸೇರಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.
ರಾಜ್ಯಸಭೆ ಸ್ಪರ್ಧೆ ಕುರಿತು ಅಧಿಕೃತವಾಗಿ ಘೋಷಿಸಿರುವ ಜೆಡಿಯು ನಾಯಕ, ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಬಿಹಾರದ ದೀರ್ಘವಾದಿ ಸಿಎಂ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಅವರು ಇದೀಗ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.
ಈ ನಡುವೆ Janata Dal (United) ಪಕ್ಷದ ಪ್ರಮುಖ ಸಭೆ ನಡೆಯುತ್ತಿದ್ದು, ಪ್ರಮುಖ ನಾಯಕರುಗಳಾದ ಸಂಜಯ್ ಜ್ಹಾ ಮತ್ತು ರಾಜೀವ್ ರಂಜನ್ ಸಿಂಗ್ ಸೇರಿದಂತೆ ಹಲವು ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದಾರೆ. ಬಿಹಾರದಲ್ಲಿ ಐದು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಐದು ಸ್ಥಾನಗಳಲ್ಲಿ ಜೆಡಿಯು ಪಕ್ಷಕ್ಕೆ ಎರಡು ಸ್ಥಾನಗಳಿದ್ದು, ಬಿಜೆಪಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ. ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಕೂಡ ಪಕ್ಷದ ಎರಡು ಸ್ಥಾನಗಳಲ್ಲಿ ಒಂದರಿಂದ ಸಂಸತ್ತಿಗೆ ಪ್ರವೇಶಿಸುವ ಸಾಧ್ಯತೆ ಇದೆ.
ಬಿಹಾರದಲ್ಲಿ ಎನ್ ಡಿಎ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿತೀಶ್ ಕುಮಾರ್ ಕೆಲ ತಿಂಗಳ ಹಿಂದೆಯಷ್ಟೇ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದರು.
ಸಿ.ಎಂ ಸ್ಥಾನದ ಮೇಲೆ ಬಿಜೆಪಿ ಕಣ್ಣು
ಒಂದು ವೇಳೆ ನಿತೀಶ್ ಕುಮಾರ್ ಅವರು ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ತನಗೆ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿಯಿದೆ. ನಿತೀಶ್ ಅವರ ಮಗ ನಿಶಾಂತ್ ಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಬಹುದು ಎಂಬ ಊಹಾಪೋಹ ಹಬ್ಬಿದೆ.


