ಕಲರ್ಸ್ ಕನ್ನಡ ವಾಹಿನಿ ನಡೆಸುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ತುರ್ತಾಗಿ ಶೋ ನಿಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಲು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ದೂರು ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಆಗಮಿಸಿ ದೂರು ನೀಡಿದ ಅವರು, ಚಿತ್ರನಟ-ಶೋ ನಿರೂಪಕ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟಿವಿ ಬಿಜಿನೆಸ್ ಹೆಡ್, ವಯಾಕಾಮ್ 18 ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
“ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಸೃಷ್ಟಿಸಲಾಗಿದೆ. ಒಟ್ಟು ಹದಿನೇಳು ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲೂ ಇರಿಸಲಾಗಿದೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನರಕ ನಿವಾಸಿಗಳನ್ನು ಜೈಲಿನ ಖೈದಿಗಳ ಹಾಗೆ ಒಂದು ಬ್ಯಾರಾಕ್ ನಲ್ಲಿ ಬಂಧಿ ಮಾಡಿ ಇಡಲಾಗಿದೆ. ಅವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
“ದಿ. 2-10-2024ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನರಕವಾಸಿ ಸ್ಪರ್ಧಿಗಳು ತಮಗೆ ಬಂದಾಗಿಂದಲೂ ಕೇವಲ ಗಂಜಿ ಊಟ ಕೊಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನರಕವಾಸಿಗಳಿಗೆ ಶೌಚಕ್ಕೆ ಅವಸರವಾದಾಗ ಸ್ವರ್ಗವಾಸಿ ಸ್ಪರ್ಧಿಗಳು ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುವುದು, ಇದಕ್ಕೆ ನರಕವಾಸಿ ಸ್ಪರ್ಧಿಗಳು ಪ್ರತಿಭಟಿಸುವುದನ್ನು ಕೂಡ ಪ್ರಸಾರ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್ ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಹಣ, ಬಹುಮಾನದ ಆಸೆಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಸ್ಪರ್ಧಿಗಳು ಅಲ್ಲಿ ನಡೆಯುವ ಶೋಷಣೆಯನ್ನು ಹೊರಗೆ ಹೇಳದಂತೆ ಬಾಯಿಮುಚ್ಚಿಸಲಾಗಿದೆ” ಎಂದು ದೂರಿದ್ದಾರೆ.
“ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಠಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಅತ್ಯಂತ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಈ ಶೋಷಣೆಗೆ ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಒಪ್ಪಿಗೆ ನೀಡಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.