ಬೀದರ್ ಜಿಲ್ಲೆ ಮಿನಿ ಭಾರತ ಇದ್ದ ಹಾಗಿದೆ. ಹಿಂದೂ,ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳು ಸಮವಾಗಿ ಸಂಗಮಗೊಂಡಿರುವ ಜಿಲ್ಲೆ ಬೀದರ್ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅಭಿಪ್ರಾಯ ಪಟ್ಟರು.
ಬೀದರ್ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅಣ್ಣ ಬಸವಣ್ಣನವರಿಂದ , ಗುರುನಾನಕ್ ವರೆಗೂ ಅಧ್ಮಾತ್ಮಿಕ ಸಂಗಮ ಆಗಿರುವ ನೆಲ ಇದು. ಹಾಗೆಯೇ ಈ ಕಡೆ ಆಂಧ್ರ- ತೆಲಂಗಾಣ ಜೊತೆಗೆ ತನ್ನ ಗಡಿಯನ್ನು ಬೆಸೆದುಕೊಂಡಿದೆ. ಆ ಕಡೆ ಮಹಾರಾಷ್ಟ್ರ ರಾಜ್ಯದ ಜೊತೆಗೂ ಗಡಿ ಹಂಚಿಕೊಂಡಿದೆ. ಭೌಗೋಳಿವಾಗಿ, ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಬಹಳ ಶ್ರೀಮಂತ ಜಿಲ್ಲೆ” ಎಂದರು.
“ಇಲ್ಲಿ ಉರ್ದು, ಮರಾಠಿ, ತೆಲುಗು, ಕನ್ನಡ ಭಾಷೆಗಳ ಸಂಗಮವೂ ಆಗಿದೆ. ಸೂಫಿ-ಶರಣರು-ವಚನಕಾರರು, ಚಳವಳಿಯ ನಾಡು. ದಾಸೋಹ ಚಳವಳಿಗೆ ಸಾಕ್ಷಿಯಾಗಿರುವ ನೆಲ. ಗಾಂಧಿವಾದ ಮತ್ತು ಸಮಾಜವಾದಿ ಆಶಯಗಳು ಆಳವಾಗಿ ಬೇರೂರಿರುವ ನೆಲ ಇದು” ಎಂದು ಬಣ್ಣಸಿದರು.
“ಹೀಗಾಗಿ ಬೀದರ್ ಜಿಲ್ಲೆಯ ಮಣ್ಣಿನ ಗುಣವೇ ಪತ್ರಕರ್ತರಿಗೆ ಮಾದರಿಯಾಗಿದೆ. ಈ ಮಣ್ಣಿನ ಗುಣ ಏನಿದೆ. ಅದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಮಾಡಿದರೂ ಸಾಕು” ಎಂದರು.
“ಪತ್ರಕರ್ತರು ಕೇಳಿಸಿಕೊಳ್ಳುವ ಕುತೂಹಲ ಕಳೆದುಕೊಂಡಿರುವುದರಿಂದ, ಸತ್ಯ ಸುಳ್ಳನ್ನು ಸರಿಯಾಗಿ ಗ್ರಹಿಸುವ ವ್ಯವದಾನ ಕಳೆದುಕೊಂಡಿರುವುದರಿಂದ ಗುಣಮಟ್ಟದ ಪತ್ರಿಕೋದ್ಯಮ ಇಲ್ಲವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸಚಿವರಾದ ಈಶ್ವರ್ ಖಂಡ್ರೆ, ರಹೀಂ ಖಾನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಗಿರೀಶ್ ಕೋಟೆ, ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.