ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಕಡೆ ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಭೋವಿ ಅಭಿವೃದ್ಧಿ ನಿಗಮದ ಕಚೇರಿ, ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಲೀಲಾವತಿ ಅವರಿಗೆ ಸೇರಿದ ಜಾಲಹಳ್ಳಿಯ ಮನೆ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ. ನಾಗರಾಜಪ್ಪ ಅವರಿಗೆ ಸೇರಿದ ವಿಜಯನಗರದ ಮನೆ, ನಿಗಮದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿವಾಸಗಳ ಮೇಲೆ ದಾಳಿಯಾಗಿದೆ. ಅಲ್ಲದೆ, ಲೀಲಾವತಿ, ನಾಗರಾಜಪ್ಪ ಅವರ ಸಂಬಂಧಿಕರ ಮನೆಗಳ ಮೇಲೂ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಲೀಲಾವತಿ ಮತ್ತು ನಾಗರಾಜಪ್ಪರ ಮನೆಯಲ್ಲಿ ಇಂಚಿಂಚೂ ಶೋಧ ನಡೆಸಿದ ಅಧಿಕಾರಿಗಳು, ಹಗರಣಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಲೀಲಾವತಿ, ನಾಗರಾಜಪ್ಪ ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಹಣಕಾಸು ವ್ಯವಹಾರ, ಚಿರಾಸ್ತಿ ಹಾಗೂ ಚರಾಸ್ತಿಯ ಮಾಹಿತಿ, ಬೇನಾಮಿಯಾಗಿ ಸಂಬಂಧಿಕರ ಹೆಸರಿನಲ್ಲಿ ಸಂಪಾದಿರುವ ಆಸ್ತಿಯ ದಾಖಲೆಪತ್ರಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಲೀಲಾವತಿ ಅವರ ಸಹೋದರಿ ಆರ್. ಮಂಗಳಾ ಮತ್ತು ಭೋವಿ ನಿಗಮದ ಕಚೇರಿಯಲ್ಲಿ 2021ರಿಂದ 2022ರವರೆಗೆ ಅಧೀಕ್ಷಕರಾಗಿದ್ದ ಪಿ.ಡಿ. ಸುಬ್ಬಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಇ.ಡಿ ಅಧಿಕಾರಿಗಳು ದಾಳಿ ವೇಳೆ ನಿಗಮದ ಕೇಂದ್ರ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ಭೋವಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ.
ನಕಲಿ ಕಂಪನಿಗಳಿಗೆ ಹಣ
ನಾಗರಾಜಪ್ಪ ಅವರು ಬೇರೆಯವರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಸಾಲ ಮಂಜೂರಾತಿ ಹೆಸರಿನಲ್ಲಿ ಹಣ ಲಪಟಾಯಿಸಲು ಮಧ್ಯವರ್ತಿಗಳ ನೆರವಿನಲ್ಲಿ ಅಧಿಕಾರಿಗಳೇ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿದ್ದರು. ಸಾಲ ಮಂಜೂರಾತಿಗೂ ಮುನ್ನವೇ ಫಲಾನುಭವಿಗಳಿಂದ ಖಾಲಿ ಚೆಕ್ ಹಾಗೂ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದರು. ಫಲಾನುಭವಿಗೆ 50 ಸಾವಿರ ರೂ. ಕೊಟ್ಟು ಉಳಿದ 4 ಲಕ್ಷದಿಂದ 5 ಲಕ್ಷ ರೂ. ಹಣವನ್ನು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಪಡೆಯುತ್ತಿದ್ದರು ಎಂದು ನಿಗಮದ ಸಿಬ್ಬಂದಿ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.