ಇದು ಅಂತಿಂಥ ಹೆದ್ದಾರಿಯಲ್ಲ. ವಾಹನ ಸವಾರರು ಮೇಲೆ ಅಪಘಾತವೆಂಬ ತೂಗುಗತ್ತಿ ಝಳಪಿಸುವ ಹೆದ್ದಾರಿ. ಸ್ವಲ್ಪ ಯಾಮಾರಿದರೂ ಸಾಕು ಅಪಘಾತ ಕಟ್ಟಿಟ್ಟ ಬುತ್ತಿ ಅದುವೆ ರಾಷ್ಟ್ರೀಯ ಹೆದ್ದಾರಿ 4.
ಅದರಲ್ಲೂ ನೆಲಮಂಗಲದಿಂದ ತುಮಕೂರುವರೆಗಿನ ಪ್ರಯಾಣ ಒಂದು ರೀತಿಯಲ್ಲಿ ತಂತಿ ಮೇಲಿನ ನಡಿಗೆ ಎಂದೇ ಹೇಳಬಹುದು. ಮೊನ್ನೆಯಷ್ಟೇ ಈ ರಸ್ತೆಯಲ್ಲಿ ಕಾರಿನ ಮೇಲೆ ಕಂಟೇನರ್ ಬಿದ್ದು ಆರು ಮಂದಿ ಮೃತಪಟ್ಟರು. ಈ ಪ್ರಕರಣದ ಬೆನ್ನಲ್ಲೇ, ಹೊರಬಂದ ಅಂಕಿ ಅಂಶಗಳು ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯ ಅಪಘಾತಗಳ ತಾಣ ಎಂದು ತಿಳಿಸಿದೆ.
ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯ ನೆಲಮಂಗಲದ ಮಾದನಾಯಕನಹಳ್ಳಿ ಠಾಣಾ ದಾಖಲೆಯಲ್ಲಿ ಈ ವರ್ಷ 1500ಕ್ಕೂ ಅಪಘಾತಗಳು ಸಂಭವಿಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಮುಂದುವರಿದು ನೆಲಮಂಗಲ ಸಂಚಾರಿ ಠಾಣೆಯಲ್ಲೇ ಅತಿ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
2024ರ ಜನವರಿಯಿಂದ ಡಿಸೆಂಬರ್ ಮೊದಲ ವಾರದವರೆಗೆ 144 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 148 ಜನರು ಸಾವನ್ನಪ್ಪಿದ್ದಾರೆ ಎನ್ನುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ನೆಲಮಂಗಲ ತಾಲೂಕು ರಾಜ್ಯದ ಪ್ರಮುಖ ಅಪಘಾತದ ಕೇಂದ್ರವಾಗಿ ಹೊರಹೊಮ್ಮಿದೆ. ನೆಲಮಂಗಲ ರಾಜ್ಯದ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಗೇಟ್‌ವೇ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 48 (ಬೆಂಗಳೂರು-ತುಮಕೂರು) ಮತ್ತು (ಹಾಸನ-ನೆಲಮಂಗಲ) ಹೆದ್ದಾರಿ 75 ಎರಡು ಹೆದ್ದಾರಿಗಳನ್ನು ಸಂದಿಸುವ ಪ್ರಮುಖ ಕೇಂದ್ರ ಆಗಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗಿವೆ.
ಹೆಚ್ಚು ಅಪಘಾತಕ್ಕೆ ಕಾರಣಗಳೇನು?
ನೆಲಮಂಗಲ ತುಮಕೂರು ಹೆದ್ದಾರಿ ದಶಪಥ ರಸ್ತೆಯನ್ನಾಗಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸುಮಾರು 70 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, ಎರಡು ನಗರಗಳು ಒಂದು ಪಟ್ಟಣಕ್ಕೆ ಒಂದೇ ಸಂಚಾರಿ ಠಾಣೆ ಇದೆ. ಅಲ್ಲದೆ ಈ ಸಂಚಾರಿ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಕಾರಣ ಹೆದ್ದಾರಿಗಳಲ್ಲಿ ಸಂಚಾರ ಮುಕ್ತ ಮಾಡಲು ಕಷ್ಟಸಹಜವಾಗಿದೆ.
ಈ ನಡುವೆ ಹೆದ್ದಾರಿಗಳಲ್ಲಿ ರಾಜಕಾರಣಿಗಳು, ಸಚಿವರು, ಸೇರಿದಂತೆ ಗಣ್ಯರು ಸಂಚರಿಸುವುದರಿಂದ ಸಿಬ್ಬಂದಿ ಕೊರತೆ ಹೆಚ್ಚಳವಾಗಿದೆ. ಈ ನಡುವೆ ಸುಂಕ ವಸೂಲಿ ಮಾಡುತ್ತಿರುವ ಟೋಲ್ ಕಂಪನಿಗಳು ಬರೀ ಹಣ ಸಂಗ್ರಹ ಮಾಡುವುದು ಮಾತ್ರ ನಮ್ಮ ಕರ್ತವ್ಯ ಎಂದು ನಿರ್ಲಕ್ಷ್ಯ ತೋರುತ್ತಿವೆ. ಈ ಎಲ್ಲ ಗಂಭೀರ ಸಮಸ್ಯೆಗಳನ್ನು ಗೃಹ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರ ವರದಿ ಪಡೆದುಕೊಂಡಿದೆ.