ಮಹಾರಾಷ್ಟ್ರದ ಪುಣೆಯಲ್ಲಿ ಅಪ್ರಾಪ್ತನ ಐಷಾರಾಮಿ ಕಾರು ಅಪಘಾತ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತಿರುವ ನಗರದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಮದ್ಯಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆ ವೇಳೆ ಹಲವು ಮದ್ಯ ಸೇವಿಸಿ ವಾಹನ ಚಾಲನೆ( ಡ್ರಿಂಕ್ ಆ್ಯಂಡ್ ಡ್ರೈವ್) ಪ್ರಕರಣಗಳು ಪತ್ತೆಯಾಗಿವೆ. ಮದ್ಯಸೇವಿಸಿ ವಾಹನ ಚಲಾಯಿಸುತ್ತಿದ್ದ ಹಲವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಖುದ್ದು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಸಂಚಾರ ಸಬ್ ಇನ್ಸ್ಪೆಕ್ಟರ್, ಮೇಲ್ದರ್ಜೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಬಾಡಿ ಕ್ಯಾಮ್ ಸಹಿತವಾಗಿ ತಡರಾತ್ರಿ 2 ಗಂಟೆವರೆಗೂ ವಾಹನ ಸವಾರರ ಮದ್ಯ ಸೇವಿಸಿ ಚಲಾಯಿಸುವ ವಾಹನಗಳನ್ನು ತಪಾಸಣೆ ಕೈಗೊಂಡಿದ್ದಾರೆ.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯ ಸೇವನೆ ವಾಹನ ಚಾಲನೆ ಪ್ರಕರಣಗಳು ಪತ್ತೆಯಾಗಿದ್ದು ಇನ್ಮುಂದೆ ವಾರ ಅಥವಾ 15 ದಿನಕ್ಕೊಮ್ಮೆ ಕಾರ್ಯಾಚರಣೆ ನಡೆಸಲು ನಿರ್ಧಾರ ಮಾಡಲಾಗಿದೆ.
ಇನ್ನು ದಕ್ಷಿಣ ವಿಭಾಗದಲ್ಲಿ 41 ಕಡೆ ಚೆಕ್ಪೋಸ್ಟ್ ಹಾಕಿ ವಿಶೇಷ ಕಾರ್ಯಾಚರಣೆ ಮಾಡಲಾಯಿತು. ಸಂಚಾರ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪ್ರತಿಯೊಂದು ವಾಹನ ತಪಾಸಣೆ ಮಾಡಿ ಮದ್ಯಸೇವಿಸಿ ವಾಹನ ಚಲಾಯಿಸುವವರಿಗೆ ಸ್ಥಳದಲ್ಲೇ ದಂಡ ಹಾಕಲಾಗಿದ್ದು,ಒಂದೇ ರಾತ್ರಿಯಲ್ಲಿ 160ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ.
ಹಾಗೆಯೇ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 17,361ಕ್ಕೂ ಅಧಿಕ ವಾಹನ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಒಟ್ಟು 386 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಎಂ.ಎನ್.ಅನುಚೇತ್ ತಿಳಿಸಿದ್ದಾರೆ.