ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಣ ಮಾಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯಲ್ಲಿನ ಶನೇಶ್ವರ ದೇವಸ್ಥಾನದ ಬಳಿ ವೈದ್ಯರನ್ನು ಅಪಹರಿಸಲಾಗಿದೆ. ಸುನೀಲ್ ಅವರು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದು ಬಿಡುಗಡೆಗೆ ಮೂರೂ ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಅಪಹರಣಕಾರರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.