ಬಳ್ಳಾರಿ ಲೋಕಸಭಾ ಚುನಾವಣೆಯ ವೇಳೆ ಮತದಾರರಿಗೆ ಕಾಂಗ್ರೆಸ್ ಪಕ್ಷ ತಲಾ 200 ರೂ.ಗಳನ್ನು ಮತಕ್ಕಾಗಿ ಹಂಚಿದ್ದಾಗಿ ಇ.ಡಿ ತಿಳಿಸಿದೆ. ಅಧಿಕೃತವಾಗಿ ಅದು ನಾಯಕರ ಹೆಸರುಗಳನ್ನೂ ತಿಳಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಮುಖ್ಯ ಚುನಾವಣಾ ಆಯುಕ್ತರನ್ನು ನಾನು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ” ಎಂದರು.
“ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ಮಾಡಿದ ಕಾಂಗ್ರೆಸ್, ದಲಿತರ 187 ಕೋಟಿ ರೂ. ಹಣವನ್ನು ಲಪಟಾಯಿಸಿದೆ. ತೆಲಂಗಾಣ, ಬಳ್ಳಾರಿ ಇತರ ಜಿಲ್ಲೆಗಳಿಗೆ ಆ ಹಣ ಕಳಿಸಿದ ಮಾಹಿತಿ ಇ.ಡಿ ಪ್ರೆಸ್ ರಿಲೀಸ್‍ನಲ್ಲಿದೆ” ಎಂದು ವಿವರಿಸಿದರು.
“ನಿಗದಿತ ಮೊತ್ತಕ್ಕಿಂತ ಒಂದು ರೂಪಾಯಿ ಹೆಚ್ಚು ಖರ್ಚು ಮಾಡಿದರೂ ಕೂಡ ಅನರ್ಹಗೊಳ್ಳುತ್ತಾರೆ. ಆ ದೃಷ್ಟಿಯಿಂದ ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕಾರಾಂ ಅವರನ್ನು ಅನರ್ಹಗೊಳಿಸುವಂತೆ ಕೋರಿದ್ದೇವೆ. ಚುನಾವಣೆಯಲ್ಲಿ ಅಕ್ರಮ ಆಗಿದ್ದು, ಕ್ರಮ ಕೈಗೊಳ್ಳಲು ಮನವಿಯನ್ನು ನಾವು ಮುಖ್ಯ ಚುನಾವಣಾ ಆಯುಕ್ತರಿಗೆ ಕೊಟ್ಟಿದ್ದೇವೆ” ಎಂದರು.
“ರಾಜ್ಯದಲ್ಲಿ 3 ಉಪ ಚುನಾವಣೆಗಳು ಘೋಷಣೆ ಆದ ಮೇಲೆ, ಎಂಎಲ್‍ಸಿ ಚುನಾವಣೆ ನಡೆಯುತ್ತಿರುವಾಗ ಹಾಗೂ ಐದಾರು ಜಿಲ್ಲೆಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದರೂ ಕೂಡ ಇವರು ಮುಖಪುಟದಲ್ಲಿ ಪುಟಗಟ್ಟಲೆ ಜಾಹೀರಾತು ಕೊಡುತ್ತಿದ್ದಾರೆ. ನಾವು ಇಂಥ ಸಾಧನೆ ಮಾಡಿದ್ದು, ಮುಂದೆ ಇಂಥ ಸಾಧನೆ ಮಾಡುವುದಾಗಿ ಸರಕಾರಿ ದುಡ್ಡು ಬಳಸಿದ ಜಾಹೀರಾತಿನಲ್ಲಿ ತಿಳಿಸಿರುವುದು ಚುನಾವಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ” ಎಂದು ಹೇಳಿದರು.