Homeಕರ್ನಾಟಕಬಳ್ಳಾರಿ ಪಾಲಿಕೆ ಅಕ್ರಮ | ಮೂವರ ವಿರುದ್ಧ ಕ್ರಿಮಿನಲ್ ಕೇಸ್: ಬೈರತಿ ಸುರೇಶ್

ಬಳ್ಳಾರಿ ಪಾಲಿಕೆ ಅಕ್ರಮ | ಮೂವರ ವಿರುದ್ಧ ಕ್ರಿಮಿನಲ್ ಕೇಸ್: ಬೈರತಿ ಸುರೇಶ್

ತೆರಿಗೆ ಪಾವತಿದಾರರಿಗೆ ನಕಲಿ ರಸೀದಿ ನೀಡಿ ಅವ್ಯವಹಾರ ನಡೆಸಿರುವ ಆರೋಪದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮೂವರು ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನ 35 ಫ್ಲ್ಯಾಟ್ ಮಾಲೀಕರಿಂದ 2,80,179 ರಾಉಪಾಯಿಗಳ ತೆರಿಗೆ ಪಾವತಿಸಿಕೊಳ್ಳಲಾಗಿದೆ. ಆದರೆ, ಈ ಹಣವನ್ನು ಪಾಲಿಕೆ ಖಾತೆಗೆ ಜಮಾ ಮಾಡದೇ, ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಇದಕ್ಕೆ ಬಳ್ಳಾರಿ ಒನ್ ಹೆಸರಿನಲ್ಲಿ ನಕಲಿ ರಸೀದಿಗಳನ್ನು ಸೃಷ್ಟಿಸಿ ಫ್ಲ್ಯಾಟ್ ಮಾಲೀಕರಿಗೆ ನೀಡಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಿದರು.

ಈ ಹಣವನ್ನು ಶೇ.18 ರ ಬಡ್ಡಿಯೊಂದಿಗೆ ತಪ್ಪಿತಸ್ಥರಿಂದ ಪಾವತಿಸಿಕೊಳ್ಳಲಾಗಿದೆ. ಅಲ್ಲದೇ, ತಪ್ಪಿತಸ್ಥರಾದ ಸಹಾಯಕ ಕಂದಾಯ ಅಧಿಕಾರಿ ಎನ್.ವೀರೇಶ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಮನೋಹರ ಮತ್ತು ದ್ವಿತೀಯ ದರ್ಜೆ ಸಹಾಯಕ ಕೆ.ದೊಡ್ಡಬಸಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇದಲ್ಲದೇ, ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ದಾವಣಗೆರೆಯ ನಿವೃತ್ತ ನ್ಯಾಯಾಧೀಶರಾದ ಈಶ್ವರ್ ಜಂತ್ಲಿ ನೇತೃತ್ವದ ವಿಚಾರಣಾ ಆಯೋಗವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ವಿಚಾರಣೆ ಆಯೋಗದ ವರದಿ ಬಂದ ನಂತರ ತಪ್ಪಿತಸ್ಥ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ನೀರು ಸಂಸ್ಕರಣಾ ಘಟಕ ನಿರ್ಮಾಣ

ಆಡಳಿತಾರೂಢ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಒಳಚರಂಡಿ ಯೋಜನೆಯಡಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮಲಿನ ನೀರು ಸಂಸ್ಕರಣಾ ಘಟಕಗಳ ಮತ್ತು ವೆಟ್ ವೆಲ್ ಘಟಕಗಳ ನಿರ್ಮಾಣಕ್ಕೆ ಅಗತ್ಯವಿರುವ ಖಾಸಗಿ ಜಮೀನುಗಳನ್ನು ಸ್ಥಳೀಯ ಸಂಸ್ಥೆಗಳ ವತಿಯಿಂದ ಸ್ವಾಧೀನಪಡಿಸಿಕೊಂಡು ಹಸ್ತಾಂತರ ಮಾಡುವ ವಿಚಾರದಲ್ಲಿ ವಿಳಂಬ ಉಂಟಾಗಿದೆ. ಈ ಕುರಿತು ಸದ್ಯದಲ್ಲಿಯೇ ಉನ್ನತಾಧಿಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments