ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟ ಹಗರಣಗಳ ಸೂತ್ರಧಾರಿ ಅಧಿಕಾರಿಗಳ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಹೆಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಸದ್ಯ ಕೇಂದ್ರ ಸಚಿವರೂ ಎಂಬುದನ್ನೂ ಲೆಕ್ಕಿಸದೇ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಬಳಸಿರುವ ಪದಗಳು ಅನುಚಿತವಾಗಿದೆ. ಕೇಂದ್ರದ ಸಚಿವರನ್ನೇ ಬೆದರಿಸಲು ಹೊರಟಿರುವ ಅವರ ವರ್ತನೆ ಪ್ರಜಾಪ್ರಭುತ್ವವನ್ನೇ ಅಣಕಿಸಿದ ಅಕ್ಷಮ್ಯ ನಡೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಇಂತಹ ನಡವಳಿಕೆಗಳನ್ನು ಪಕ್ಷಾತೀತವಾಗಿ ಪ್ರತಿಯೊಬ್ಬರೂ ಖಂಡಿಸಲೇಬೇಕು. ಆದರೆ ವಿಪರ್ಯಾಸದ ಸಂಗತಿ ಏನೆಂದರೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದ’ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಅಧಿಕಾರಿಗಳಿಗೆ ಅಂಕುಶ ಹಾಕುವವರಿಲ್ಲದೇ ಆಡಳಿತದಲ್ಲಿ ಅರಾಜಕತೆ ಸೃಷ್ಠಿಯಾಗಿದೆ” ಎಂದಿದ್ದಾರೆ.
“ಗಾಂಧಿ ಜಯಂತಿಯ ಈ ದಿನ ‘ಸತ್ಯಮೇವ ಜಯತೆ’ಯ ಮೇಲೆ ಸವಾರಿ ಮಾಡುತ್ತಿರುವ ಮುಖ್ಯಮಂತ್ರಿಯ ಬಾಯಿಂದ ಈ ರಾಜ್ಯದ ಜನ ಮಹಾತ್ಮನ ಸಂದೇಶ ಕೇಳಬೇಕಿರುವುದು ದೌರ್ಭಾಗ್ಯವೇ ಸರಿ” ಎಂದು ಟೀಕಿಸಿದ್ದಾರೆ.
“ಕಾಂಗ್ರೆಸ್ ಶತಮಾನದುದ್ದಕ್ಕೂ ಗಾಂಧಿಯವರ ಹೆಸರನ್ನು ಮತ ಬ್ಯಾಂಕ್ ವೃದ್ಧಿಗೊಳಿಸಲು ಬಳಸಿಕೊಂಡಿದೆ. ಬ್ರಿಟಿಷರ ಕಪಿಮುಷ್ಠಿಯಿಂದ ಭ್ರಷ್ಟ ಅಧಿಕಾರಿಗಳ ಮುಷ್ಠಿಗೆ ಪ್ರಜಾತಂತ್ರ ವ್ಯವಸ್ಥೆಯನ್ನು ಸಿಲುಕಿಸಿ ದರ್ಪ ಪ್ರದರ್ಶಿಸುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಪೋಷಿಸುತ್ತಾ ಬಂದಿರುವುದು ‘ಸ್ವತಂತ್ರ ಭಾರತ’ಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆಯಾಗಿದೆ” ಎಂದು ಕುಟುಕಿದ್ದಾರೆ.