ಲೋಕಸಭಾ ಚುನಾವಣೆ ಸಮೀಪಿಸಿದ್ದು, ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ದೇವಾಲಯ ಸುತ್ತಾಟಕ್ಕೆ ಮುಂದಾಗಿದ್ದಾರೆ. ಮಂಗಳವಾರ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳ ದೇಗುಲಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, “ಯಾವಾಗಲೂ ಧರ್ಮ ಯುದ್ಧದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಅದೇ ರೀತಿ ಈ ಬಾರಿಯೂ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದರು.
“ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎಂಬ ಮಾತಿದೆ. ನನ್ನ ಜೀವನದಲ್ಲಿ ಮಂಜುನಾಥ, ಈಶ್ವರ, ಗಂಗಾಧರ ಅಜ್ಜ ರಕ್ಷಣೆ ಇದೆ. ಹಾಗಾಗಿ ಈ ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಸ್ವಾಮಿ, ಅಣ್ಣಪ್ಪಸ್ವಾಮಿ ದರ್ಶನ ಮಾಡಿ ಆಶೀರ್ವಾದ ಪಡೆದು ಹೋಗುವ ಪದ್ಧತಿ, ಪರಂಪರೆ ಇಟ್ಟುಕೊಂಡಿದ್ದೇನೆ” ಎಂದು ತಿಳಿಸಿದರು.
“ಮಂಜುನಾಥ ಸ್ವಾಮಿ ಧರ್ಮಸ್ಥಳದ ಶಕ್ತಿ. ಆತ ಮಾತು ಬಿಡದ ಮಂಜುನಾಥ. ನಾವು ಪಂಚ ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇನ್ನೂ ಹೆಚ್ಚಿಗೆ ಶಕ್ತಿ ಕೊಡಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನುಡಿದಂತೆ ನಡೆಯಲು ಆ ದೇವರು ಶಕ್ತಿ ಕೊಟ್ಟಿದೆ. ಇದು ನಮ್ಮ ಭಾಗ್ಯ. ಉಳಿದಿದ್ದು ಜನ ತೀರ್ಮಾನಿಸುತ್ತಾರೆ” ಎಂದರು.
ಧರ್ಮಸ್ಥಳಕ್ಕೆ ಎಲ್ಲ ಹೆಣ್ಣು ಮಕ್ಕಳು ಉಚಿತವಾಗಿ ಬಂದಿದ್ದಾರೆ. ಇಲ್ಲಿಯ ವ್ಯಾಪಾರ ವಹಿವಾಟಿಗೆ ಹೊಸ ಚೈತನ್ಯ ಬಂದಿದೆ. ಎಲ್ಲರೂ ತೀರ್ಥಯಾತ್ರೆ, ಧರ್ಮ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಜನ ಕೊಟ್ಟ ಶಕ್ತಿ. ಅವರಿಗೆ ಋಣವನ್ನು ತೀರಿಸಿದ್ದೇವೆ. ಆ ಉಪಕಾರ ಸ್ಮರಣೆಯನ್ನು ಇಟ್ಟುಕೊಳ್ಳುತ್ತಾರೆ” ಎಂದು ಶಿವಕುಮಾರ್ ಹೇಳಿದರು.
ಡಿ ಕೆ ಶಿವಕುಮಾರ್ ಅವರು ಮಂಜುನಾಥ ಸ್ವಾಮಿ ದರ್ಶನ ಪಡೆದ ಸಂದರ್ಭದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.