ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು, ಶ್ರಮಿಕರು ಸೇರಿದಂತೆ ರಾಜ್ಯದ ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಸಮತೋಲನವಾದ ಬಜೆಟ್ ನೀಡಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದ ಇತಿಹಾಸದಲ್ಲೇ 16 ಬಾರಿ ಬಜೆಟ್ ಮಂಡಿಸಿ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಬಾರಿಯ ಬಜೆಟ್ 4.09 ಲಕ್ಷ ಕೋಟಿಗೆ ಹೋಗಿದೆ. ಅದು ಸಾಮಾನ್ಯ ಅಂತ ನಾನು ಅಂದುಕೊಳ್ಳುವುದಿಲ್ಲ. ಎಲ್ಲರಿಗೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದಿದ್ದಾರೆ.
ಮೂಲಭೂತ ಸೌಲಭ್ಯ, ನೀರಾವರಿ, ಸಮಾಜ ಕಲ್ಯಾಣ, ಗ್ಯಾರಂಟಿ ಯೋಜನೆಗಳಿಗೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ನ್ಯಾಯ ಒದಗಿಸಿದ್ದಾರೆ. ಕೈಗಾರಿಕೆ, ಕೃಷಿ, ಶಿಕ್ಷಣ, ನಗರಾಭಿವೃದ್ಧಿ ಸೇರಿ ಹಲವು ವಲಯಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಆಧ್ಯತೆ ನೀಡಲಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಜೆಟ್ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಬಲವರ್ಧನೆಗೆ ಒತ್ತು ನೀಡಿರುವುದು ಸ್ವಾಗತರ್ಹ:- ನಮ್ಮ ಸರ್ಕಾರವು ನಂದಿ ಬೆಟ್ಟದ ಕೂಡುಗುರ್ಕಿ ಮತ್ತು ಕೆಜಿಎಫ್ ಬಳಿ ಎರಡು ಭಾರತೀಯ ಮೀಸಲು ಪೊಲೀಸ್ ಪಡೆಗಳನ್ನು (ಐಆರ್ ಬಿ) ಸ್ಥಾಪಿಸಲು 80 ಕೋಟಿ ರೂಪಾಯಿ ಅನುದಾನ ಕಲ್ಪಿಸಲಾಗಿದೆ. ಬೆಂಗಳೂರು ನಗರದ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ ಈಗಿರುವ 8 ಪೊಲೀಸ್ ವಿಭಾಗಗಳನ್ನು 11ಕ್ಕೆ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 5 ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ವರ್ಷದಿಂದ ಬಳ್ಳಾರಿ, ದಾವಣಗೆರೆ, ಮೈಸೂರ್ ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆಗೆ ಒತ್ತು ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಪೊಲೀಸ್ ಗೃಹ 2025 ಯೋಜನೆಯಲ್ಲಿ ಇವರೆಗೆ 2016 ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, 2068 ವಸತಿಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ 2025-26ನೆ ಸಾಲಿಗೆ 300 ಕೋಟಿ ರೂ. ನೀಡಿರುವುದು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ವಾರ್ಷಿಕೋತ್ಸವದ ಆರೋಗ್ಯ ತಪಾಸಣೆಗೆ ನೀಡಲಾಗುತ್ತಿದ್ದ ವೆಚ್ಚವನ್ನು ಹೆಚ್ಚಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದವರು ಶೇ 18ರಷ್ಟಿದ್ದಾರೆ. ಅವರನ್ನು ಹೊರತುಪಡಿಸಿ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಅವರನ್ನು ಅಭಿವೃದ್ಧಿಯ ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿಯೇ ಕೆಲವು ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಓಲೈಕೆ ಮಾಡಿದ್ದಾರೆ ಎಂಬುದು ತಪ್ಪು. ಎಲ್ಲ ವರ್ಗದ ಜನರ ಏಳಿಗೆಗಾಗಿ ಆಧ್ಯತೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿದಿರುವ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದು ಸಚಿವ ಪರಮೇಶ್ವರ ಅವರು ಹೇಳಿದ್ದಾರೆ.