ದರೋಡೆಕೋರ ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಅದನ್ನು ಸುಟ್ಟು ಹಾಕಿದ್ದಾರೆ ಎಂದು ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಆರೋಪಿಸಿದರು.
ದೆಹಲಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕಡತಗಳನ್ನು ಸುಟ್ಟು ಹಾಕಿದ ಕುರಿತು ಮಾತನಾಡಿದ್ದಕ್ಕೆ ನನ್ನ ಮೇಲೆ ಅಪವಾದ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ದರೋಡೆಕೋರರನ್ನು ಹಿಡಿಯಲು ಹೋದಾಗ ಪೊಲೀಸರಿಗೆ ಗುಂಡು ಹೊಡೆಯುವ ಕೆಲಸವನ್ನು ಬೈರತಿ ಸುರೇಶ್ ಮಾಡಿದ್ದಾರೆ” ಎಂದು ದೂರಿದರು.
“ಸಿದ್ದರಾಮಯ್ಯನವರೇ ಇಂಥವರನ್ನು ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ? ರಾಜಕಾರಣಿಗಳು ಮಹಾಭಾರತವನ್ನು ಓದಬೇಕು. ಕೌರವರ ಜೊತೆ ಶಕುನಿ ಯಾಕೆ ಸೇರಿಕೊಂಡಿದ್ದ? ಕೌರವರಿಂದ ದುರ್ಯೋಧನನ್ನು ಉದ್ಧಾರ ಮಾಡಲು ಅವನು ಸೇರಿಕೊಂಡಿರಲಿಲ್ಲ. ಅವರನ್ನು ಮುಗಿಸಲು ಸೇರಿಕೊಂಡಿದ್ದ. ಅಂಥ ಶಕುನಿಗಳು ಇವತ್ತಿಗೂ ರಾಜಕಾರಣದಲ್ಲಿ ದೊಡ್ಡ ಪದವಿಗೆ ಬಂದಾಗ ಮುಖ್ಯಮಂತ್ರಿಯ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ” ಎಂದು ಲೇವಡಿ ಮಾಡಿದರು.
ರಾಕೇಶ್ ಸಿದ್ದರಾಮಯ್ಯ ಸಾವಿಗೆ ಯಾರು ಕಾರಣ?
“ರಾಜಕಾರಣಿಗಳು ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಕೇಶ್ ಸಿದ್ದರಾಮಯ್ಯರ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನರು ಹೇಳುತ್ತಿದ್ದಾರೆ. ಒಪ್ಪಿಕೊಳ್ಳುತ್ತೀರಾ ನೀವು? ಸಿದ್ದರಾಮಯ್ಯನವರ ಆಸ್ತಿ ಹೊಡೆಯಲು, ಅವರ ದುಡ್ಡು ಹೊಡೆಯಲು, ಸಿದ್ದರಾಮಯ್ಯರ ವಾರಸುದಾರಿಕೆಗೆ ಬೈರತಿ ಸುರೇಶ್ ಬಂದಿದ್ದಾರೆ. ರಾಕೇಶ್ ಸಿದ್ದರಾಮಯ್ಯರನ್ನು ಮುಗಿಸಿದ್ದಾಗಿ ಜನರು ಮಾತನಾಡುತ್ತಾರೆ. ಏನು ಉತ್ತರ ಕೊಡುತ್ತೀರಿ” ಎಂದು ಪ್ರಶ್ನೆ ಮಾಡಿದರು.
“ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಹೆಣ್ಮಕ್ಕಳ ಮೇಲೆ ಅಪವಾದ ಹಾಕಿದಾಕ್ಷಣ ಓಡಿ ಹೋಗುತ್ತಾರೆ ಅಂದುಕೊಳ್ಳದಿರಿ. ನಾನು ಶೋಭಾ ಕರಂದ್ಲಾಜೆ. ತಪ್ಪು ಮಾಡಿಲ್ಲ. ನಾನು ನಿಮ್ಮದೇ ಹೆಬ್ಬಾಳದಲ್ಲಿದ್ದೇನೆ. ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಜವಾಬ್ದಾರಿ ನಮ್ಮದಿದೆ” ಎಂದು ಎಚ್ಚರಿಸಿದರು.
“ಸಿದ್ದರಾಮಯ್ಯನವರ ಕುಟುಂಬಕ್ಕೆ ಕಳಂಕ ತಂದವರು ನೀವು. ನಿಮ್ಮ ಹಿಂದೆ ಮುಂದೆ ಎಲ್ಲವೂ ಸುತ್ತುತ್ತಿದೆ. ಯಾಕೆ ಮೈಸೂರಿಂದ ಫೈಲ್ ಹೊತ್ತುಕೊಂಡು ಬಂದಿರಿ? ಫೈಲ್ ಗಾಯಬ್ ಆದ ಕುರಿತು ತನಿಖೆ ನಡೆಯಲಿ. ಬೈರತಿ ಸುರೇಶ್ ಅವರನ್ನು ಬಂಧಿಸಿದಾಗ, ಅವರನ್ನು ತನಿಖೆ ಮಾಡಿದಾಗ ಸತ್ಯ ಹೊರಬರುತ್ತದೆ” ಎಂದರು.