ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೋರು ಧ್ವನಿಯಲ್ಲಿ ಬಹಿರಂಗವಾಗಿ ಘರ್ಜಿಸಿದರು.
ಬಾಗಲಕೋಟೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥ ಸಂಯುಕ್ತ ಪಾಟೀಲ್ ಗೆಲುವಿಗೆ ಕರೆ ನೀಡಲು ಕರೆದಿದ್ದ ಬೃಹತ್ ಜನ ಸಮಾವೇಶದಲ್ಲಿ ಮಾತನಾಡಿ, “ದೇಶದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಯವರಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಭಯಾನಕ ಸುಳ್ಳು ಹೇಳ್ಕೊಂಡು ತಿರುಗುತ್ತಿದ್ದಾರೆ” ಎಂದರು.
“ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎನ್ನುವ ಸುಳ್ಳನ್ನು ಹೇಳುವ ಮೂಲಕ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಎಚ್ಚರ ವಹಿಸಿ” ಎಂದು ಹಿಂದುಳಿದ ಜಾತಿ-ಸಮುದಾಯಗಳಿಗೆ ಎಚ್ಚರಿಸಿದರು.
“ಮೋದಿ ಮೀಸಲಾತಿ ವಿಚಾರದಲ್ಲೂ ಸುಳ್ಳು ಹೇಳ್ತಿದಾರೆ. ಇವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಈ ಮಟ್ಟದ ಸುಳ್ಳು ಹೇಳುವ ಇವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ” ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
“ಮಂಡಲ್ ವರದಿ ವಿರೋಧಿಸಿ ಹಿಂದುಳಿದವರ ಹಾದಿ ತಪ್ಪಿಸಿ ಆತ್ಮಹತ್ಯೆಗೆ ದೂಡಿದ್ದು ಇದೇ ಬಿಜೆಪಿ. ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದ ರಾಮಾಜೋಯಿಸ್ ಬಿಜೆಪಿಯವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ವಿರೋಧಿಯಾಗಿರುವ ಇವರು ಈಗ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟಿ ಏಕ ಕಾಲದಲ್ಲಿ ಎರಡೂ ಸಮುದಾಯಗಳ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗದ್ದಿಗೌಡರನ್ನು ಸೋಲಿಸಿ: ಸಿದ್ದರಾಮಯ್ಯ ಕರೆ
“ಪಿ ಸಿ ಗದ್ದಿಗೌಡರನ್ನು ಈ ಬಾರಿ ಸೋಲಿಸಲೇಬೇಕು. ಕಾಂಗ್ರೆಸ್ಸಿನ ಸಂಯುಕ್ತ ಪಾಟೀಲ್ ಪಾರ್ಲಿಮೆಂಟಿನಲ್ಲಿ ನಿಮ್ಮ ಧ್ವನಿ ಆಗಿರ್ತಾರೆ. ಆದ್ದರಿಂದ ಗೆಲ್ಲಿಸಿ ಕಳಯಹಿಸಿ” ಎಂದು ಸಿದ್ದರಾಮಯ್ಯ ಕರೆ ನೀಡಿದರು.
“ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲಗಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ” ಎಂದು ಪ್ರಶ್ನಿಸಿದರು.
“20 ವರ್ಷ ನಿಮ್ಮ ಪರವಾಗಿ ಒಂದೂ ಮಾತಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಈ ಬಾರಿ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಸಂಯುಕ್ತ ಪಾರ್ಲಿಮೆಂಟಿನಲ್ಲಿ ಬಾಗಲಕೋಟೆ ಜನರ ಧ್ವನಿ ಆಗಿರ್ತಾರೆ, ರಾಜ್ಯದ ಜನರ ಧ್ವನಿ ಆಗಿರ್ತಾರೆ” ಎಂದರು.