ಇತ್ತೀಚೆಗೆ ಹತ್ಯೆಗೀಡಾದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮಗ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ದೇಶದ ನೂತನ ಸುಪ್ರೀಂ ನಾಯಕನನ್ನಾಗಿ ಇರಾನ್ ಆಡಳಿತದ ತಜ್ಞರ ಮಂಡಳಿ ನೇಮಕ ಮಾಡಿದೆ.
ಅಮೆರಿಕ – ಇಸ್ರೇಲ್ ದಾಳಿಯಲ್ಲಿ ಹಿರಿಯ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಯಾದ ಒಂಬತ್ತು ದಿನಗಳ ನಂತರ ಸರ್ಕಾರದ ತಜ್ಞರ ಸಭೆಯಲ್ಲಿ ತಮ್ಮ ಮುಂದಿನ ನಾಯಕನನ್ನು ಆಯ್ಕೆ ಮಾಡಲಾಗಿದೆ.
ಅಮೆರಿಕಾ ಮತ್ತು ಇಸ್ರೇಲ್ ನೇತೃತ್ವದ ಆಪರೇಶನ್ ಎಪಿಕ್ ಫ್ಯೂರಿ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಅಲಿ ಖಮೇನಿ ಅವರು ಟೆಹ್ರಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ಮೊದಲ ದಾಳಿ ವೇಳೆ ಹತ್ಯೆಗೀಡಾಗಿದ್ದರು.
ಇಸ್ರೇಲ್ ಈಗಾಗಲೇ ಇರಾನ್ ಗೆ ಎಚ್ಚರಿಕೆ ನೀಡಿದ್ದು, ಹೊಸ ಉತ್ತರಾಧಿಕಾರಿಯನ್ನು ನಾವು ಬಿಡುವುದಿಲ್ಲ, ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ, ಯುಎಇಯಲ್ಲಿ ಇರಾನ್ ನಡೆಸಿದ ದಾಳಿಗಳು ನಿನ್ನೆ ಸಹ ಅಬುಧಾಬಿಯನ್ನು ಗುರಿಯಾಗಿಸಿಕೊಂಡು ಮುಂದುವರಿರೂ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆಹಿಡಿಯಲಾಯಿತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಕಿರಿಯ ಖಮೇನಿ ಅವರನ್ನು ಹಗುರ ವ್ಯಕ್ತಿ ಎಂದು ತಳ್ಳಿಹಾಕಿದ್ದರು. ಮತ್ತು ಹೊಸ ನಾಯಕನ ನೇಮಕಾತಿಯಲ್ಲಿ ಅವರ ಪಾತ್ರ ಇರಬೇಕು ಎಂದು ಭಾನುವಾರ ಹೇಳಿದ್ದರು. ಅವರು ನಮ್ಮಿಂದ ಅನುಮೋದನೆ ಪಡೆಯದಿದ್ದರೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನೂತನ ನಾಯಕನನ್ನು ಘೋಷಣೆ ಮಾಡುವ ಕೆಲವೇ ಹೊತ್ತು ಮೊದಲು ಟ್ರಂಪ್ ಎಬಿಸಿ ನ್ಯೂಸ್‌ಗೆ ತಿಳಿಸಿದ್ದರು.
ಅಮೆರಿಕ ಸೇನೆ ಇರಾನ್ ನಾಗರಿಕರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದು, ಟೆಹ್ರಾನ್ ನಲ್ಲಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದ ಇರಾನ್ ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಆರೋಪಿಸಿದೆ. ಇದರಿಂದ ಆ ಪ್ರದೇಶಗಳು ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.


