Homeಕರ್ನಾಟಕಕಾಂಗ್ರೆಸ್‌ನ ಘಟಾನುಘಟಿಗಳಿಂದ ಶಾಸಕರ ಖರೀದಿಗೆ ಪ್ರಯತ್ನ: ವಿಜಯೇಂದ್ರ ಆರೋಪ

ಕಾಂಗ್ರೆಸ್‌ನ ಘಟಾನುಘಟಿಗಳಿಂದ ಶಾಸಕರ ಖರೀದಿಗೆ ಪ್ರಯತ್ನ: ವಿಜಯೇಂದ್ರ ಆರೋಪ

ಮೊನ್ನೆ ನಡೆದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹಿನ್ನಡೆ ಆಗುವುದಾಗಿ ಖಾತ್ರಿಯಾಗಿ, ಕಾಂಗ್ರೆಸ್ಸಿನ ಘಟಾನುಘಟಿಗಳು ಇವತ್ತು ಸಾವಿರಾರು ಕೋಟಿಯೊಂದಿಗೆ ತಮ್ಮದೇ ಪಕ್ಷದ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೂ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿ, “ಆಡಳಿತದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರಿಗೂ ಈ ಮಾಹಿತಿ ಸಿಕ್ಕಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಶಾಸಕರ ಖರೀದಿ ವಿಚಾರಕ್ಕೆ ಬರುವ ದಿನಗಳಲ್ಲಿ ಕಾಲವೇ ಉತ್ತರ ಕೊಡಲಿದೆ” ಎಂದು ಪ್ರಶ್ನೆಗೆ ಉತ್ತರಿಸಿದರು.

“ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ ಎಂಬುದು ಸ್ವತಃ ಸಿದ್ದರಾಮಯ್ಯನವರಿಗೆ ಮನವರಿಕೆ ಆಗಿದೆ. ಹಾಗಾಗಿ ಬಿಜೆಪಿ ವಿರುದ್ಧ ಈ ರೀತಿ ಆರೋಪ, ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಯಾವತ್ತು ರಾಜೀನಾಮೆ ಕೊಡುತ್ತಾರೆ? ಯಾರು ಹೊಸ ಸಿಎಂ ಎಂಬುದೇ ಪ್ರಶ್ನೆ” ಎಂದರು.

“ಕಾಂಗ್ರೆಸ್ ಪಕ್ಷದೊಳಗಡೆ ಕುದುರೆವ್ಯಾಪಾರ ನಡೆದಿದೆ. ಬಿಜೆಪಿಯಲ್ಲಿ ಇರುವುದು ಕೇವಲ 66 ಶಾಸಕರು ಮಾತ್ರ. ಆ ಪ್ರಶ್ನೆ ಉದ್ಭವಿಸುವುದಿಲ್ಲ; ಸಿದ್ದರಾಮಯ್ಯನವರೇ, ನಿಮ್ಮ ಅಕ್ಕಪಕ್ಕ ಇರುವ ಹಿರಿಯ ಸಚಿವರಿಗೆ ತಾವು ಭಯ ಪಡಬೇಕಿದೆ. ಬಿಜೆಪಿ ಬಗ್ಗೆ ಆತಂಕ ಬೇಕಿಲ್ಲ” ಎಂದು ಹೇಳಿದರು.

3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಗೆದ್ದು ಹೊಸ ಇತಿಹಾಸ ಸೃಷ್ಟಿ

“ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಎನ್‍ಡಿಎ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಭ್ರಮೆಯಲ್ಲಿತ್ತು. ಆದರೆ, ಅಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು ಗೆದ್ದೇಗೆಲ್ಲುವ ವಾತಾವರಣ ಇದೆ ಎಂದು ತಿಳಿಸಿದರು. ಅದೇರೀತಿ ಸಂಡೂರಿನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲೂ ಭರತ್ ಬೊಮ್ಮಾಯಿಯವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. 3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಗೆದ್ದು ಹೊಸ ಇತಿಹಾಸ ಸೃಷ್ಟಿ ಆಗಲಿದೆ” ಎಂದು ತಿಳಿಸಿದರು.


“ವಾಸ್ತವಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸ್ವತಃ ಮುಖ್ಯಮಂತ್ರಿಗಳು, ಅವರ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯರಿಗೆ ತಮ್ಮ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ ಎಂದು ಮನವರಿಕೆಯಾಗಿದೆ. ಕಾಂಗ್ರೆಸ್ಸಿನ ಒಳಗಡೆ ಇವತ್ತು ನಾಲ್ಕಾರು ಜನ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಮುಂದಾಗಿದ್ದಾರೆ. ಹೊರಗಡೆಯಿಂದ ಬಂದವರಿಗೆ 5 ವರ್ಷ ಅವಕಾಶ ಕೊಟ್ಟಿದ್ದು, ಈಗ ಮತ್ತೆ 2 ವರ್ಷವಾಗಿದೆ ಎಂಬ ಭಾವನೆ ಇದೆ” ಎಂದು ವಿಶ್ಲೇಷಿಸಿದರು.

ಎರಡು ಹಂತದಲ್ಲಿ ಹೋರಾಟಕ್ಕೆ ತೀರ್ಮಾನ

“ಬಿಜೆಪಿ ಹಿರಿಯರ ಜೊತೆ ಚರ್ಚೆ ನಡೆಸಿದ್ದು, ಎರಡು ಹಂತದಲ್ಲಿ ಹೋರಾಟಕ್ಕೆ ತೀರ್ಮಾನ ಮಾಡಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಒಟ್ಟಾರೆಯಾಗಿ ಎರಡು ಹಂತದಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದೇವೆ. ಅದರ ಪ್ರಕಾರ 3 ತಂಡಗಳ ರಚನೆ ಮಾಡಿದ್ದೇವೆ”ಎಂದು ತಿಳಿಸಿದರು.

“ರೈತರ ಪರವಾಗಿ ಹೋರಾಟಕ್ಕೆ ಮುಜುಗರ ಯಾಕೆ? ಅದರ ಬಗ್ಗೆ ನಮ್ಮ ತಕರಾರಿಲ್ಲ ಎಂದ ಅವರು, ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಅಯೋಗ್ಯತನವನ್ನು ಪ್ರದರ್ಶಿಸುತ್ತಿದೆ. ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರಾಜ್ಯದ ರೈತರು ಆತಂಕದಲ್ಲಿದ್ದಾರೆ. ಮಠಮಾನ್ಯಗಳ ಜಮೀನು, ದೇವಸ್ಥಾನಗಳ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಸ್ಪಷ್ಟ ಉತ್ತರ ಕೊಡುವವರೆಗೆ, ಎಲ್ಲಿನವರೆಗೆ ರೈತರಿಗೆ ನಿರಾಳತೆ ಸಿಗುವುದಿಲ್ಲವೋ ಅಲ್ಲಿನವರೆಗೆ ದೃಢವಾಗಿ ಹೋರಾಟ ಮುಂದುವರೆಯಲಿದೆ” ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments