Homeಕರ್ನಾಟಕಕೇಜ್ರಿವಾಲ್ ವಿರುದ್ಧ ನಡೆದ ಪ್ರಯತ್ನ ಈಗ ಸಿದ್ದರಾಮಯ್ಯ ಮೇಲೂ ನಡೆಯುತ್ತಿದೆ: ಎಂ ಬಿ ಪಾಟೀಲ

ಕೇಜ್ರಿವಾಲ್ ವಿರುದ್ಧ ನಡೆದ ಪ್ರಯತ್ನ ಈಗ ಸಿದ್ದರಾಮಯ್ಯ ಮೇಲೂ ನಡೆಯುತ್ತಿದೆ: ಎಂ ಬಿ ಪಾಟೀಲ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ನಾವು ರಾಜಕೀಯವಾಗಿಯೂ ಕಾನೂನಿನ ದೃಷ್ಟಿಯಿಂದಲೂ ಎದುರಿಸಲಿದ್ದೇವೆ. ಈಗ ನ್ಯಾಯಾಲಯವು ಪ್ರಾಥಮಿಕ ತನಿಖೆಗೆ ಅನುಮತಿ ಕೊಟ್ಟಿದೆಯೇ ವಿನಾ ಪ್ರಾಸಿಕ್ಯೂಷನ್ ಗೆ ಅಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಮಾತನಾಡಿರುವ ಅವರು, “ಕುಮಾರಸ್ವಾಮಿ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ಮುಗಿದಿದ್ದರೂ ರಾಜ್ಯಪಾಲರು ಅವುಗಳ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೆ, ಸಿದ್ದರಾಮಯ್ಯ ವಿರುದ್ಧ ಅವರು ಅನುಕೂಲಸಿಂಧು ತೀರ್ಮಾನ ಕೈಗೊಂಡಿದ್ದಾರೆ. ಇದೆಂತಹ ನೈತಿಕತೆ?” ಎಂದರು.

“ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ತಪ್ಪೇನೂ ಇಲ್ಲ. ಇಡೀ ವಿದ್ಯಮಾನಗಳ ಹಿಂದೆ ಕೇಂದ್ರ ಸರಕಾರದ ಪಾತ್ರವಿದೆ. ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ ಕೊನೆಗೆ ಏನಾಯಿತು? ಸುಪ್ರೀಂಕೋರ್ಟು ಕೊನೆಗೆ ಛೀಮಾರಿ ಹಾಕಿತು. ಹಲವು ರಾಜ್ಯಗಳಲ್ಲಿ ಅಸ್ಥಿರತೆ ಸೃಷ್ಟಿಸಿರುವ ಕೇಂದ್ರದ ಬಿಜೆಪಿ ಸರಕಾರವು ಕರ್ನಾಟಕದಲ್ಲೂ ಅಂತಹುದೇ ಯತ್ನವನ್ನು ನಡೆಸುತ್ತಿದೆ” ಎಂದು ಅವರು ಹರಿಹಾಯ್ದರು.

“ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಹಲವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ರಾಜ್ಯಪಾಲರು ಬಹಳ `ಸೆಲೆಕ್ಟೀವ್’ ಆಗಿ ವರ್ತಿಸುತ್ತಿರುವುದು ಸರಿಯಲ್ಲ. ಇದನ್ನು ನಾವು ಒಪ್ಪುವುದಿಲ್ಲ. ಮುಂದೆ ಏನು ಮಾಡಬೇಕೆಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಲಿದ್ದಾರೆ. ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದೇವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments