ಸಂಸತ್ ಭವನದೊಳಗೆ ಆಗುಂತಕರಿಂದ ದಾಳಿ ನಡೆದಿದ್ದು, ಲೋಕಸಭೆ ಭದ್ರತಾ ವೈಫಲ್ಯದ ಹೊಣೆಯನ್ನು ಗೃಹ ಸಚಿವ ಅಮಿತ್ ಶಾ ಹೊರಬೇಕು ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಆಗ್ರಹಿಸಿದರು.
ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲೂ ಪ್ರತಿಧ್ವನಿಸಿತು. ಈ ವೇಳೆ ಮಾತನಾಡಿದ ಬಿ ಕೆ ಹರಿಪ್ರಸಾದ್, “ಘಟನೆಯನ್ನ ನಾನು ಖಂಡಿಸುತ್ತೇನೆ. ಈ ಹಿಂದೆ ಉಗ್ರಗಾಮಿಗಳು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ ಈ ಘಟನೆ ನಡೆದಿದೆ. ಹೊಸ ಪಾರ್ಲಿಮೆಂಟ್ ಕಟ್ಟಡ ಕಟ್ಟಿದ್ದಾರೆ. ಆದರೂ ದೇಶದ ಭದ್ರತೆ ಕುಸಿದಿದೆ” ಎಂದರು.
ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ” ಸುಮಾರು 22 ವರ್ಷಗಳ ಹಿಂದೆ ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡಿದ್ದರು. ಇದೀಗ 22 ವರ್ಷಗಳ ಬಳಿಕ ಇದೇ ದಿನ ಈ ಘಟನೆ ನಡೆದಿದೆ. ಇದು ಪ್ರಧಾನಿ ನರೇಮದ್ರ ಮೋದಿ ಸರ್ಕಾರದ ವೈಫಲ್ಯ” ಎಂದು ಟೀಕಿಸಿದರು.
“ಯುವಕರು ಬಳಿಸಿದ ಪಾಸ್ ಸಂಸದ ಪ್ರತಾಪ್ ಸಿಂಹ ಕಚೇರಿಯದ್ದೇ ಆಗಿದ್ದರೆ ಮೊದಲು ಅವರ ಮೇಲೆ ಪ್ರಕರಣ ದಾಖಲಿಸಬೇಕು. ನಮ್ಮವರು ಪಾಸ್ ಪಡೆದಿದ್ದರೆ ಬಿಜೆಪಿಯವರು ಸುಮ್ಮನೆ ಇರ್ತಿದ್ರಾ” ಎಂದು ಪ್ರಶ್ನಿಸಿದರು.
ಸುವರ್ಣ ಸೌಧದಲ್ಲಿ ಬಿಗಿ ಭದ್ರತೆ
ಲೋಕಸಭೆಯಲ್ಲಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತಿದೆ. ಸ್ಪೀಕರ್ ಯುಟಿ ಖಾದರ್ ಸೂಚನೆಯಂತೆ ಸುವರ್ಣ ಸೌಧದ ಒಳಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರುತ್ತಿದ್ದಾರೆ.