ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಗರ್ ಶರ್ಮಾ ಎಂಬಾತ ಸಂಸತ್ ಭವನದೊಳಗೆ ದಾಳಿ ಮಾಡಿದ್ದಾನೆ.
2001ರಲ್ಲಿ ನಡೆದ ಸಂಸತ್ ಭವನ ಮೇಲಿನ ದಾಳಿಗೆ 22 ವರ್ಷಗಳು ಪೂರೈಸಿದ ದಿನವೇ ಇಂದು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ನುಗ್ಗಿ ದಾಳಿ ಮಾಡಿರುವುದು ಗಮನಾರ್ಹ ಸಂಗತಿ.
ಬುಧವಾರ ನಡೆದ ಲೋಕಸಭಾ ಕಲಾಪ ವೀಕ್ಷಣೆಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಹಾಗೂ ಮನರೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 1ರ ಸುಮಾರಿಗೆ ಏಕಾಏಕಿ ಸದನದೊಳಗೆ ನುಗ್ಗಿ, ಹಳದಿ ಬಣ್ಣದ ಹೊಗೆ ಸಿಂಪಡಿಸಿ, “ಸರ್ವಾಧಿಕಾರ ನಡೆಯುವುದಿಲ್ಲ” ಎಂದು ಘೋಷಣೆ ಕೂಗಿದ್ದಾರೆ.
ಸಂಸತ್ ಭವನದ ಹೊರಗೂ ಕೂಗು
ಸಂಸತ್ ಭವನದ ಹೊರಗೂ ಇಬ್ಬರು ಘೋಷಣೆ ಕೂಗಿದ್ದಾರೆ. ಮಹಿಳೆ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಈವರೆಗೆ ವಶಕ್ಕೆ ಪಡೆಯಲಾಗಿದೆ. ಘಟನೆ ಕುರಿತು ವಿವರಿಸಿದ ಸಂಸದ ಡ್ಯಾನಿಶ್ ಅಲಿ, “ಹಳದಿ ಬಣ್ಣದ ಹೊಗೆ ಸಿಂಪಡಿಸಿ ಘೋಷಣೆ ಕೂಗುತ್ತಿದ್ದ ಇಬ್ಬರನ್ನು ಸಂಸದರು ಹಾಗೂ ಭದ್ರತಾ ಸಿಬ್ಬಂದಿ ಹಿಡಿದರು. ಅದರಲ್ಲಿ ಒಬ್ಬನ ಹೆಸರು ಸಾಗರ್. ಆತ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಅತಿಥಿ” ಎಂದು ತಿಳಿಸಿದ್ದಾರೆ.
ಸಂದರ್ಶಕರ ಪಾಸ್ ರದ್ದುಗೊಳಿಸಿದ ಸ್ಪೀಕರ್
ಸದನದಲ್ಲಿ (ಡಿಸೆಂಬರ್ 13) ಭಾರೀ ಭದ್ರತಾ ಲೋಪವಾದ ನಂತರ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂದರ್ಶಕರ ಪಾಸ್‌ಅನ್ನು ರದ್ದುಗೊಳಿಸಿದ್ದಾರೆ. ಇಂದಿನ ಕಲಾಪದ ನಂತರ ಸದನದ ಸರ್ವಪಕ್ಷದ ನಾಯಕರ ಸಭೆಗೆ ಕರೆ ನೀಡಿದ್ದಾರೆ.
ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪದ ನಂತರ ಇಬ್ಬರು ವ್ಯಕ್ತಿಗಳು ಸದನದ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಗದ್ದಲವುಂಟು ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸದನದೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಗ್ಯಾಸ್ ಸ್ಪ್ರೇ ಹರಡಿದ್ದಾರೆ. 2001ರ ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದು ಈ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ವಿವರವಾದ ವರದಿಯನ್ನು ಲೋಕಸಭೆ ಸ್ಪೀಕರ್ ಕೇಳಿದ್ದಾರೆ.