Homeಕರ್ನಾಟಕಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯ ನನ್ನ ಕ್ಷೇತ್ರದಲ್ಲೇ ಕಂಡುಬಂದಿದೆ: ‌ಸಚಿವ ಪರಮೇಶ್ವರ್

ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯ ನನ್ನ ಕ್ಷೇತ್ರದಲ್ಲೇ ಕಂಡುಬಂದಿದೆ: ‌ಸಚಿವ ಪರಮೇಶ್ವರ್

ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನುಗಳಿವೆ. ಅವುಗಳನ್ನು ಯಾವ ರೀತಿ ಹೊಸ ಕಾನೂನಿಗೆ ಸೇರಿಸಬಹುದು ಎಂಬುದನ್ನು ಪರಿಶೀಲಿಸುವಂತೆ‌ ಮುಖ್ಯಮಂತ್ರಿಗಳು ಹೇಳಿದ್ದಾರೆ. ಎರಡು ಮೂರು ದಿನದೊಳಗೆ ಅಂತಿಮವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

‌ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳು ನಿನ್ನೆಯ ಸಭೆಯಲ್ಲಿ ಕಾನೂನು ಸೆಕ್ರೆಟರಿಗಳಿಗೆ, ಪಾರ್ಲಿಮೆಂಟರಿ ಸೆಕ್ರೆಟರಿಗಳಿಗೆ ಸೂಚಿಸಿದ್ದಾರೆ. ಶೀಘ್ರವಾಗಿ ಮಾಡುತ್ತಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ‌. ಊರು ಬಿಟ್ಟು ಹೋಗುತ್ತಿದ್ದಾರೆ. ಇದು ನಿಲ್ಲಬೇಕಿದೆ. ಇದಕ್ಕೆ ಮುಖ್ಯವಾಗಿ ಕಾನೂನು ತರಬೇಕಿದೆ” ಎಂದರು.

“ನನ್ನ ಕ್ಷೇತ್ರದಲ್ಲಿ 2.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಅದಕ್ಕೆ 4.50 ಲಕ್ಷ ರೂ. ವಾಪಸ್ ಕಟ್ಟಿದ್ದಾರೆ. ಆದರೂ ಇನ್ನು 80 ಸಾವಿರ ರೂ. ಕಟ್ಟಬೇಕು ಅಂತ ಮನೆಗೆ ಬೀಗ ಹಾಕಿ, ಮನೆ ಮೇಲೆ ಬರೆದಿದ್ದಾರೆ. ಕುಟುಂಬಸ್ಥರು ಊರು ಬಿಟ್ಟು ಹೋಗಿದ್ದರು. ನನ್ನ ಗಮನಕ್ಕೆ ಬಂದ‌‌ಕೂಡಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮನೆ ಬಿಟ್ಟು ಹೋಗಿದ್ದವರನ್ನು ವಾಪಸ್ ಕರೆತರಲಾಗಿದೆ. ಮನೆಗೆ ಪೇಂಟ್ ಮಾಡಿಸಿ ಕೊಡಲಾಗಿದೆ. ಇಂತಹ ಘಟನೆಗಳನ್ನು ನಿಲ್ಲಿಸಲು ಕಾನೂನು ಬೇಕು” ಎಂದು ಹೇಳಿದರು.

“ಮೈಕ್ರೋ ಫೈನಾನ್ಸ್ ಸೆಟಲ್‌ಮೆಂಟ್ ಬೇರೆ ವಿಚಾರ. ರಾಜ್ಯದಲ್ಲಿ 59 ಸಾವಿರ ಕೋಟಿ ರೂ. ಸಾಲ ಕೊಟ್ಟಿರುವುದು ಇದೆ. ಅದರ ಬಗ್ಗೆ ಹೆಚ್ಚು ಒತ್ತು ನೀಡಲು ಹೋಗಿಲ್ಲ. ಕೂಡಲೇ ಕಾನೂನು ತಂದು ದೌರ್ಜನ್ಯ ತಡೆಯಬೇಕಿದೆ. ಎಂಎಫ್‌ಐಗಳು ಕೋರ್ಟ್‌ಗೆ ಹೋಗುತ್ತಾರೆ ಎಂಬುದು ಗಮನಕ್ಕೆ ಇದೆ. ಅವರು ಕೋರ್ಟ್‌ಗೆ ಹೋಗದಿರುವಂತಹ ಕಾನೂನು ಮಾಡಬೇಕಲ್ಲವೆ. ಇದನ್ನು ಕೂಡ ಸಭೆಯಲ್ಲಿ ಚರ್ಚೆ‌ ಮಾಡಿದ್ದೇವೆ” ಎಂದರು‌.

ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನದ‌ ಕುರಿತು ಪ್ರತಿಕ್ರಿಯಿಸಿ, “ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ ನಮ್ಮ‌ ಪಕ್ಷದಲ್ಲಿ ಕೆಲವು ಪದ್ಧತಿಗಳಿವೆ.‌ ಎಲ್ಲರ ಪರವಾಗಿ ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರು‌ ಮಾಡುತ್ತಾರೆ. ವಿವಿಧ ನಿಗಮ ಮಂಡಳಿಗೆ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಿ, ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ.‌ ಕಾರ್ಯಕರ್ತರದ್ದು ಅಧ್ಯಕ್ಷರು‌ ಮಾಡಬೇಕಿದೆ” ಎಂದು ತಿಳಿಸಿದರು.

ಸಚಿವರೊಂದಿಗೆ ಸಭೆ ಮಾಡಿಲ್ಲ

“ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಅವರೊಂದಿಗೆ ಯಾವುದೇ ರೀತಿಯ ಸಭೆ ಮಾಡಿಲ್ಲ. ನಿನ್ನೆ ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಜಾತ್ರೆಗೆ ಆಹ್ವಾನಿಸಲು ವಿಧಾನಸೌಧ ನನ್ನ ಕಾರ್ಯಾಲಯಕ್ಕೆ ಬಂದಿದ್ದರು. ರಾಜಣ್ಣ, ಸತೀಶ್ ಜಾರಕಿಹೊಳಿಯವರಿಗೆ ಸ್ವಾಮೀಜಿಯವರು ನನ್ನ ಕಾರ್ಯಾಲಯದಲ್ಲಿ ಇದ್ದಾರೆ ಎಂಬುದು ಗೊತ್ತಾಗಿ ಅಲ್ಲಿಗೆ ಬಂದರು. ಸ್ವಾಮೀಜಿಯವರ ಆಶೀರ್ವಾದ ತೆಗೆದುಕೊಂಡು ಹೋದರು” ಎಂದು ಸ್ಪಷ್ಟಪಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments