ದೆಹಲಿಯ ನೂತನ ಮುಖ್ಯಮಂತ್ರಿ ಯಾರೆಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಅವರು ಆಯ್ಕೆಯಾಗಿದ್ದಾರೆ.
ಸೆ. 17ರಂದು ನಡೆದ ಆಮ್ ಆದ್ಮಿ ಪಾರ್ಟಿಯ ಶಾಸಕಾಂಗ ಸಭೆಯಲ್ಲಿ ಅತಿಶಿ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.
ಬೆಳಗ್ಗೆಯಿಂದ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಸಭೆ ನಡೆದಿತ್ತು, ಈ ಅವಧಿಯಲ್ಲಿ ಅನೇಕ ಹೆಸರುಗಳು ಕೇಳಿಬಂದಿದ್ದವು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅತಿಶಿ ಅವರ ಹೆಸರನ್ನು ಮುಂದಿಡಲಾಗಿತ್ತು. ಆದರೆ ಸಭೆಯಲ್ಲಿ ಅತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದರು ಮತ್ತು ಇತರ ನಾಯಕರು ಅವರನ್ನು ಬೆಂಬಲಿಸಿದರು.
ದೆಹಲಿಯ ಅಬಕಾರಿ ನೀತಿಯಡಿ ಬಂಧನಕ್ಕೀಡಾಗಿದ್ದ ಹಾಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಇತ್ತೀಚೆಗಷ್ಟೇ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ. ಸದ್ಯದಲ್ಲೇ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದಾಗಿ ಅವರು ಘೋಷಿಸಿದ್ದಾರೆ. ಆ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಪಟ್ಟಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ.